ಬಂದ್ ಕೇವಲ ಪ್ರತಿಭಟನೆಗೆ ಸೀಮಿತ

ಹರಪನಹಳ್ಳಿ.ಜ.10; ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಎರಡನೇ ದಿನ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಎಂದಿನಂತೆ ಬಸ್ ಸಂಚಾರ ಸೇರಿದಂತೆ ವ್ಯಾಪಾರ, ವಹಿವಾಟು ಎಲ್ಲವೂ ನಡೆದವು. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂ.ಎಲ್) ಪಕ್ಷಗಳ ಅಂಗ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟು ಹೊಸಪೇಟೆ ರಸ್ತೆ ಮಾರ್ಗವಾಗಿ ಇಜಾರಿ ಶಿರಸಪ್ಪ ವೃತ್ತದಲ್ಲಿ ಸೇರಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಅಧ್ಯಕ್ಷ ಇದ್ಲಿ ರಾಮಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರರಾಗಿದ್ದಾರೆ. ಯಾವುದೇ ರೀತಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡದೇ ಕೇವಲ ಸುಳ್ಳು ಹೇಳುತ್ತಾ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ವಿದೇಶಗಳನ್ನು ಸುತ್ತುವುದೇ ಕಾಯಕ ಮಾಡಿಕೊಂಡಿದ್ದು, ಪ್ರತಿಪಕ್ಷಗಳನ್ನು ಟೀಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದರು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ, ಭ್ರಷ್ಟಾಚಾರಿಗಳನ್ನು ಮಟ್ಟ ಹಾಕುತ್ತೇನೆ ಎಂದಿದ್ದ ಮೋದಿಯವರು, ಉದ್ಯಮಿಗಳು ಬ್ಯಾಂಕ್‍ನಲ್ಲಿರುವ ಹಣವನ್ನೆಲ್ಲಾ ತೆಗೆದುಕೊಂಡು ವಿದೇಶಗಳಿಗೆ ಹೋಗಿದ್ದರೂ ಏನೂ ಮಾಡದೇ ಕೈಕಟ್ಟಿ ಕುಳಿತಿದ್ದಾರೆ. ಅಚ್ಚೆ ದಿನ್ ಯಾವಾಗ ಬರುತ್ತೆ ಅಂತ ಅವರೇ ಉತ್ತರಿಸಬೇಕು. ಕಳೆದ ನಾಲ್ಕೂವರೆ ವರ್ಷದಲ್ಲಿ ರೈತರು, ಬಡಜನರು, ಕಾರ್ಮಿಕರ ವಿರೋ ನೀತಿ ಅನುಸರಿಸುತ್ತಾ ಶ್ರೀಮಂತರ ಪರವಾಗಿ ಕಾನೂನುಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಾರಿಗೆ ನೌಕರರ ಸಂಘದ ಅಧ್ಯಕ್ಷ ಕೊಟ್ರೇಶ್, ಗ್ರಾ.ಪಂ ನೌಕರರ ಅಧ್ಯಕ್ಷ ಸುರೇಶ್, ಗುಳೆದಹಟ್ಟಿ ಸಂತೋಷ್, ಸಂದೇರ ಪರಶುರಾಮ್, ಹುಲಿಕಟ್ಟಿ ರಾಜಪ್ಪ, ಮಾಬುಸಾಬ್, ಕೆಂಚಪ್ಪ, ಪಿ.ದುರುಗಪ್ಪ, ಇಬ್ರಾಹಿಂ ಮತ್ತಿತರರು ಭಾಗವಹಿಸಿದ್ದರು.

Leave a Comment