ಬಂದ್‌ಗೆ ರಾಜ್ಯಾದ್ಯಂತ ಬೆಂಬಲ : ವಿಷದಂತೆ ಏರುತ್ತಿರುವ ಇಂಧನ ಬೆಲೆಗೆ ಪ್ರತಿಪಕ್ಷಗಳ ತೀವ್ರ ವಿರೋಧ

ಬೆಂಗಳೂರು/ನವದೆಹಲಿ, ಏ. ೯- ಪೆಟ್ರೋಲ್-ಡೀಸೆಲ್, ಗ್ಯಾಸ್ ದರ ಏರಿಕೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ನಾಳೆ ಕರೆ ನೀಡಿರುವ `ಭಾರತ್ ಬಂದ್’ಗೆ ವಿವಿಧ ಪಕ್ಷಗಳು ಕೈಜೋಡಿಸಿದ್ದು, ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ನಾಳೆ `ಬಂದ್’ ಬಿಸಿ ಮುಟ್ಟುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ.

  •  ನಾಳೆ ಭಾರತ್ ಬಂದ್.
  •  ರಾಜ್ಯದಲ್ಲಿ ಬಂದ್‌ಗೆ ಕಾಂಗ್ರೆಸ್- ಜೆಡಿಎಸ್ ಬೆಂಬಲ.
  •  ಹಲವು ಸಂಘ-ಸಂಸ್ಥೆಗಳು ಬಂದ್‌ಗೆ ಬೆಂಬಲ.
  •  ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ.
  •  ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ವಿವೇಚನೆಗೆ.
  •  ಕೊಡಗಿನಲ್ಲಿ ಬಂದ್ ಆಚರಣೆ ಇಲ್ಲ.

ಕಳೆದ ಎರಡು-ಮೂರು ವಾರಗಳಿಂದ ತೈಲ ಬೆಲೆ ದಿನನಿತ್ಯ ಏರಿಕೆಯಾಗುತ್ತಿದ್ದು, ವಾಹನ ಸವಾರರಷ್ಟೇ ಅಲ್ಲದೆ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ನಾಳೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಕರೆ ನೀಡಿರುವ ಬಂದ್‌ಗೆ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿವೆ.

ಪೆಟ್ರೋಲ್-ಡೀಸೆಲ್, ಗ್ಯಾಸ್ ದರ ನಿತ್ಯದ ಏರಿಕೆಯನ್ನು ಕಾಂಗ್ರೆಸ್, ಶಿವಸೇನೆ ಸೇರಿದಂತೆ ವಿವಿಧ ಪಕ್ಷಗಳು ಪ್ರಧಾನಿ ನರೇಂದ್ರಮೋದಿ ನೇತೃತ್ವದ `ಅಚ್ಚೆ ದಿನ್’ ಇದೇನಾ ಎಂದು ಅಣಕವಾಡಿವೆ.

ರಾಜ್ಯದಲ್ಲಿ ಕಾಂಗ್ರೆಸ್ ನಡೆಸಲಿರುವ ಬಂದ್‌ಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಅಲ್ಲದೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬಂದ್‌ಗೆ ಸರ್ಕಾರ ಬೆಂಬಲಿಸುವುದಾಗಿ ಹೇಳಿರುವುದು ಬಂದ್‌ಗೆ ಮತ್ತಷ್ಟು ಬಲ ಬಂದಿದೆ,

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಜೆಡಿಎಸ್ ಬಂದ್‌ಗೆ ಕೈ ಜೋಡಿಸಲಿದೆ. ಪಕ್ಷಗಳಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು, ಆಟೋ-ಟ್ಯಾಕ್ಸಿ, ಓಲಾ, ಉಬರ್ ಕ್ಯಾಬ್, ಐಟಿ-ಬಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲು ಮುಂದಾಗಿವೆ.

ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರತನಕ ಬಂದ್‌ಗೆ ಕರೆ ನೀಡಲಾಗಿದ್ದು, ಮುನ್ನೆಚ್ಚೆರಿಕೆ ಕ್ರಮವಾಗಿ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಕೆಲವೆಡೆ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.

ಚಿತ್ರಮಂದಿರಗಳು, ಮಾಲ್‌ಗಳು ಮುಚ್ಚುವ ಸಾಧ್ಯತೆಗಳಿವೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ಕಾಂಗ್ರೆಸ್ ಜತೆಗೆ ಜೆಡಿಎಸ್ ಹಾಗೂ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ನಾಳೆ ಬಂದ್ ಯಶಸ್ವಿಯಾಗುವುದು ಬಹುತೇಕ ಖಚಿತವಾಗಿದೆ.

ಅಗತ್ಯ ಸೇವೆಗಳಾದ ಔಷಧಿ, ಮಳಿಗೆ, ಆಸ್ಪತ್ರೆ, ತರಕಾರಿ, ಹಾಲು ಸರಬರಾಜು, ತುರ್ತು ಸೇವೆಗಳನ್ನೊರತುಪಡಿಸಿ, ಸರ್ಕಾರಿ ಕಚೇರಿಗಳು, ಶಾಲೆಗಳು, ಬ್ಯಾಂಕ್‌ಗಳೂ ಸೇರಿದಂತೆ ಸರ್ಕಾರಿ ಕಚೇರಿಗಳು ಮುಚ್ಚುವ ಸಾಧ್ಯತೆಗಳಿವೆ.

ಜೆಡಿಎಸ್ ಬೆಂಬಲ

ತೈಲ ಬೆಲೆ ಹೆಚ್ಚಳ ವಿರೋಧಿಸಿ ನಾಳೆ ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಕೂಡ ಬೆಂಬಲಿಸಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಸನದಲ್ಲಿಂದು ಹೇಳಿದ್ದಾರೆ.

ಜೆಡಿಎಸ್ ಎಲ್ಲೆಲ್ಲಿ ಪ್ರಾಬಲ್ಯವಿದೆಯೋ ಅಂತಹ ಕಡೆ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಬಂದ್ ಇಲ್ಲ

ಪ್ರವಾಹದಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯಲ್ಲಿ ಬಂದ್ ಆಚರಿಸದಿರಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ತಿಳಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಂಡು ಅನೇಕರು ಮನೆ-ಮಠ, ಆಸ್ತಿ ಕಳೆದುಕೊಂಡಿದ್ದಾರೆ. ಸಂತ್ರಸ್ತರ ನೋವಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನಾಳೆ ಕೊಡಗಿನಲ್ಲಿ ಬಂದ್ ಆಚರಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

Leave a Comment