ಬಂದ್‌ಗೆ ಬೆಂಬಲಿಸಿ ಪಂಚಾಯತ್ ಕಚೇರಿ ಮುಚ್ಚಿದರು!

ಮಂಗಳೂರು, ಸೆ.೧೧- ಕಡಬದ ನೂಜಿಬಾಳ್ತಿಲ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್ ಸಿಬ್ಬಂದಿ ಕಾಂಗ್ರೆಸ್ ಮುಖಂಡರು ಬಂದ್ ಮಾಡಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಚೇರಿಗೆ ಬೀಗ ಜಡಿದು ಮನೆಗೆ ತೆರಳಿದ ಘಟನೆ ನಿನ್ನೆ ನಡೆದಿದೆ. ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಇತರ ಕಾಂಗ್ರೆಸ್ ಮಿತ್ರಪಕ್ಷಗಳು ಈ ಬಂದ್‌ನಲ್ಲಿ ಪಾಲ್ಗೊಂಡಿದ್ದವು.
ಕೆಲವೆಡೆ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಂದ್‌ಗೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರು ಇನ್ನು ಕೆಲವು ಕಡೆಗಳಲ್ಲಿ ಮುಚ್ಚಿಸಲು ನಿರಾಕರಿಸಿದ ಜನರೊಂದಿಗೆ ಕಿರಿಕ್ ಕೂಡಾ ಮಾಡಿದ್ದಾರೆ. ಇದೇ ರೀತಿ ಕಾಂಗ್ರೇಸ್ ಪಕ್ಷದ ಆಡಳಿತವಿರುವ ಬಿಳಿನೆಲೆ ಹಾಗೂ ನೂಜಿಬಾಳ್ತಿಲ ಗ್ರಾಮಪಂಚಾಯತ್‌ಗೆ ಬೆಳಗ್ಗೆ ಸುಮಾರು ೧೦ ಗಂಟೆಗೆ ತೆರಳಿದ ಕೆಲವು ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯತನ್ನು ಮುಚ್ಚುವಂತೆ ಮನವಿ ಮಾಡಿದರು.
ಪಕ್ಷವೊಂದರ ಮುಖಂಡರು ಮನವಿ ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಸರಕಾರಿ ಕಛೇರಿ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳದೆ ಎರಡೂ ಪಂಚಾಯತ್‌ಗಳ ನೌಕರರು ಕಚೇರಿಗೆ ಬೀಗ ಜಡಿದು ಮನೆಗೆ ತೆರಳಿದ್ದಾರೆ. ಅಡಿಕೆ ಕೊಳೆರೋಗದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಬಂದ ಗ್ರಾಮಸ್ಥರು ಗ್ರಾಮಪಂಚಾಯತ್‌ಗೆ ಬೀಗ ಹಾಕಿರುವ ವಿಚಾರ ಆಕ್ರೋಶಿತರಾಗಿದ್ದು, ಕೂಡಲೇ ಪಂಚಾಯತ್ ಕಚೇರಿ ತೆರೆಯುವಂತೆ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಬಿಳಿನೆಲೆ ಪಂಚಾಯತ್ ಸಿಬ್ಬಂದಿ ಮತ್ತೆ ಕಚೇರಿಯನ್ನು ತೆರೆದು ಕೆಲಸ ನಿರ್ವಹಿಸಿದರೆ, ನೂಜಿಬಾಳ್ತಿಲ ಗ್ರಾಮಪಂಚಾಯತ್ ಸಿಬ್ಬಂದಿ ಗ್ರಾಮಸ್ಥರು ಬರುವ ಮೊದಲೇ ಜಾಗ ಖಾಲಿ ಮಾಡಿಯಾಗಿತ್ತು. ಪಂಚಾಯತ್ ಸಿಬ್ಬಂದಿಯ ನಡೆಗೆ ಭಾರೀ ವಿರೋಧ ಕೇಳಿಬರಲಾರಂಭಿಸಿದೆ.

Leave a Comment