ಬಂದರು ವಿಸ್ತರಣೆ ವಿರೋಧಿಸಿ ದಿ. 16ರಂದು ಕಾರವಾರ ಬಂದ್‌

ಕಾರವಾರ, ಜ 14: ಸಾಗರಮಾಲ ಯೋಜನೆಯಡಿ ಇಲ್ಲಿನ ರವೀಂದ್ರನಾಥ್ ಠ್ಯಾಗೊರ ಕಡಲ ತೀರದಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ನಿನ್ನೆ ಮೀನುಗಾರರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಈ ವಿರೋಧ ಇಂದು ಸಹ ಮುಂದುವರೆದಿದೆ.
ಬಂದರು ವಿಸ್ತರಣೆ ಕಾಮಗಾರಿಯನ್ನು ವಿರೋಧಿಸಿ ನಿನ್ನೆ ನೂರಾರು ಮೀನುಗಾರರು ಭಾರಿ ಪ್ರತಿಭಟನೆ ನಡೆಸಿದ್ದು, ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದರು.

 
ಇಂದು ಸಹ ಬಂದರು ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ ಮೀನುಗಾರರು ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯಕ ಅವರ ಭಾವಚಿತ್ರಗಳಿಗೆ ಚಪ್ಪಲಿ ಹಾರ ಹಾಕಿ, ಸಗಣಿಯನ್ನು ಬಳಿದು ಪ್ರತಿಭಟಿಸಿದರು.
ಸಂಸದ ಅನಂತಕುಮಾರ ಹೆಗಡೆ ಹಾಗು ಶಾಸಕಿ ರೂಪಾಲಿ ನಾಯಕ ಅವರು ಈ ಯೋಜನೆಗೆ ಸಹಕಾರ ನೀಡುತ್ತಿದ್ದು, ಇದರಿಂದ ಮೀನುಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟಿಸಿದರು.
ಮೀನುಗಾರರು ಹೋರಾಟದ ಅಂಗವಾಗಿ ಇಂದು ಮೀನುಗಾರಿಕೆ ಹಾಗೂ ಮೀನು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಹಿಳಾ ಮೀನುಗಾರರು ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ.
ಬಂದರು ವಿಸ್ತರಣೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಭಾಗವಾಗಿ ಜ. 16 ರಂದು ಕಾರವಾರ ಬಂದ್‌ಗೆ ಮೀನುಗಾರರು ಕರೆ ನೀಡಿದ್ದಾರೆ.
ಬಂದರು ವಿಸ್ತರಣಿಯಿಂದ ಕಡಲ ತೀರಕ್ಕೆ ಹಾನಿಯಾಗುತ್ತದೆ. ಅಲ್ಲದೆ ಮೀನುಗಾರರಿಗೂ ಅಡತಡೆಯಾಗುತ್ತದೆ ಎಂದು ನಿನ್ನೆ ನೂರಾರು ಮೀನುಗಾರರಿಂದ ವಿರೋಧ ವ್ಯಕವಾಗಿತ್ತು.
ಈ ಪ್ರತಿಭಟನೆ ವಿಕೋಪಕ್ಕೆ ಹೋಗುವ ಸಂದರ್ಭ ಎದುರಾದಾಗ ಹಲವು ಮೀನುಗಾರರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದರು. ಆದರೆ ಈ ಪ್ರತಿಭಟನೆಯ ಜ್ವಾಲೆ  ಇಂದು ಸಹ ಮುಂದುವರೆದಿದ್ದು, ಕಾರವಾರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

Leave a Comment