ಬಂಡಿಗೆರೆ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲು

ಚಾಮರಾಜನಗರ, ಅ.09- ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಶಿಥಿಲಾವಸ್ಥೆಗೊಂಡಿದ್ದ ಬಂಡಿಗೆರೆ ಕೆರೆಗೆ ನೀರು ತುಂಬಿ ನಾಲೆಗೆ ಹೋಗುವ ಮಾರ್ಗದ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಹರದನಹಳ್ಳಿ -ಬಂಡಿಗೆರೆ ಮಾರ್ಗದಲ್ಲಿ ಕೆರೆ ಇದ್ದು, ಅಮಚವಾಡಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾದರೆ ನಾಲೆ ಹಾಗೂ ಕಾಲುವೆಗಳ ಮುಖಾಂತರ ಈ ಕೆರೆಗೆ ನೀರು ತುಂಬುತ್ತದೆ. ಬಹಳ ವರ್ಷಗಳಿಂದ ಮಳೆ ಇಲ್ಲದೆ ಕೆರೆ ಭಣಗುಟ್ಟುತ್ತಿತ್ತು. ಅಲ್ಪ ಸ್ಪಲ್ಪ ಮಳೆಯಾದರೂ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿರಲಿಲ್ಲ.
ಆದರೆ ಸೋಮವಾರ ರಾತ್ರಿ ಬಿದ್ದ ಗುಡುಗು ಸಹಿತ ಭಾರಿ ಮಳೆಯಿಂದ ಬಂಡಿಗೆರೆ ಭರ್ತಿಗೊಂಡು ಈ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತ್ತು. ಕೆರೆ ಭರ್ತಿಯಾದರೆ ನೀರು ಕೋಡಿಬಿದ್ದು 500 ಮೀಟರ್ ದೂರದಲ್ಲಿರುವ ಹರದನಹಳ್ಳಿ ಮರಗದ ಕೆರೆಗೆ ಹಾದು ಹೋಗುತ್ತಿತ್ತು. ಕೆರೆ ಏರಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತಿದ್ದಂತೆ ಒತ್ತಡ ತಡೆಯಲಾಗದೆ ನಾಲೆಯ ಸಂಪೂರ್ಣ ಏರಿ ಕುಸಿದು ಕೆರೆ ನೀರೆಲ್ಲಾ ಮರಗದ ಕೆರೆಗೆ ಹರಿದು ಹೋಗಿದೆ. ಯಾವುದೇ ರೀತಿಯ ಪ್ರಾಣ ಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಒಡೆದಿರುವ ಏರಿಯನ್ನು ದುರಸ್ಥಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಂಡಿಗೆರೆ ತುಂಬಿದ್ದ ನೀರು ಏರಿ ಒಡೆದ ಪರಿಣಾಮ ಕೆರೆ ನೀರು ಪೂರ್ಣ ಖಾಲಿಯಾಗಿದ್ದು, ಇದರಿಂದ ಈ ಭಾಗದ ರೈತರ ಕೊಳವೆ ಬಾವಿಯ ಅಂತರ್ಜಲ ವೃದ್ಧಿ ಹಾಗೂ ಬಂಡಿಗೆರೆ ಗ್ರಾಮಸ್ಥರ ಕುಡಿಯುವ ನೀರಿಗೆ ತೊಂದರೆಯಾಗಿದೆ.

Leave a Comment