ಬಂಟ್ವಾಳ ನದಿ ತಟದ ಪರಿಸರದಲ್ಲಿ ಪ್ರವಾಹ ಸ್ಥಿತಿ

ಬಂಟ್ವಾಳ, ಆ. ೯- ತಾಲೂಕು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಕ್ಷೀಣಿಸಿದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಗುರುವಾರ ನೇತ್ರಾವತಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಅಲ್ಲದೆ, ಶಂಭೂರಿನ ಡ್ಯಾಂನಲ್ಲಿಯೂ ನೀರನ್ನು ಹೊರ ಹರಿಯಲು ಬಿಟ್ಟ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬಂಟ್ವಾಳ ವ್ಯಾಪ್ತಿಯ ನದಿ ತಟದ ಪ್ರದೇಶದ ವಿವಿಧೆಡೆ ಪ್ರವಾಹದ ವಾತಾವರಣ ಉಂಟಾಗಿದೆ.
ಮುಂಜಾನೆಯಿಂದಲೇ ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿದು ಮಧ್ಯಾಹ್ನದ ವೇಳೆಗೆ ತಗ್ಗು ಪ್ರದೇಶಗಳೆಲ್ಲಾ ಜಲಾವೃತಗೊಂಡಿತು. ಬಿಸಿಲಿನ ವಾತವರಣ ಇದ್ದರೂ ಕೂಡ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ಜನರಲ್ಲೂ ಆತಂಕ ಹೆಚ್ಚಾಗ ತೊಡಗಿದ್ದು, ಬಂಟ್ವಾಳ ಪರಿಸರದಲ್ಲಿ ನೆರೆ ಆವರಿಸಿದ ಹಿನ್ನಲೆಯಲ್ಲಿ ಈ ಭಾಗದ ಕೆಲ ಶಾಲೆಗಳಿಗೆ ಮಧ್ಯಾಹ್ನದ ಬಳಿಕ ರಜೆ ನೀಡಲಾಯಿತು. ಜಕ್ರಿಬೆಟ್ಟು ಪರಿಸರದಲ್ಲಿ ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದರೆ, ಬಡ್ಡಕಟ್ಟೆಯಲ್ಲಿ ಬಸ್ ನಿಲ್ದಾಣ ಜಲಾವೃತಗೊಂಡಿತು. ಇಲ್ಲಿನ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ತಳ ಅಂತಸ್ತಿನ ಅಂಗಡಿ, ಹೊಟೇಲ್‌ಗಳಿಗೆ ನೀರು ನುಗ್ಗಿ ಅಂಗಡಿಯೊಳಗಿದ್ದ ಸಾಮಾನುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಮಾರುಕಟ್ಟೆಯ ಹಿಂಭಾಗ ನೀರು ತುಂಬಿಕೊಂಡಿತು. ಅಲ್ಲದೆ, ಪಾಣೆಮಂಗಳೂರು ವ್ಯಾಪ್ತಿಯ ವಿವಿಧೆಡೆ ಕೃಷಿ ತೋಟಕ್ಕೆ ನೀರು ನುಗ್ಗಿ ಅಡಿಕೆ, ತೆಂಗಿನ ಮರಗಳು, ಬಾಳೆಗಿಡಗಳು ಪ್ರವಾಹಕ್ಕೆ ಹೊಚ್ಚಿ ಹೋಗಿವೆ. ನೇತ್ರಾವತಿ ನದಿ ತಟದಲ್ಲಿರುವ ಸರಪಾಡಿ ಗ್ರಾಪಂ ವ್ಯಾಪ್ತಿಯ ಅಜಿಲಮೊಗರು ದರ್ಗಾದ ಮುಂಭಾಗ ನೀರು ತುಂಬಿಕೊಂಡಿದ್ದು, ರಸ್ತೆ ಹಾಗೂ ಮಸೀಯ ಕೆಳ ಅಂತಸ್ತಿಗೆ ನೀರು ನುಗ್ಗಿದೆ. ಅಲ್ಲದೆ, ಬೀಯಪಾದೆ ರಸ್ತೆಯೂ ಮುಳುಗಡೆಯಾಗಿದೆ. ಆಲಡ್ಕ ಪರಿಸರದ ಮನೆಗಳ ಸುತ್ತಮುತ್ತ ಜಲಾವೃತಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಪಾಣೆಮಂಗಳೂರು, ಬಸ್ತಿಪಡ್ಪು, ಕಂಚಿಕಾರ ಪೇಟೆ, ನಂದಾವರ, ಬ್ರಹ್ಮರಕೂಟ್ಲು, ಸಜೀಪಮುನ್ನೂರು ಮೊದಲಾದೆಡೆ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ನದಿಯಲ್ಲಿ ನೀರು ನುಗ್ಗಿ ಬರುತ್ತಿರುವ ದೃಶ್ಯವನ್ನು ನೋಡಲು ನದಿ ತೀರದಲ್ಲಿ ಜನ ಜಮಾಯಿಸುವ ದೃಶ್ಯ ಕಂಡು ಬಂತು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಕಂದಾಯಾಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸಿತು. ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಹೊರಬಿಟ್ಟ ಪರಿಣಾಮ ನೇತ್ರಾವತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿತ್ತು. ಇಂದರಿಂದಾಗಿ ತುಂಬೆ ಕಿಂಡಿಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ೭ ಮೀಟರ್ ನೀರು ಕಾಯ್ದಿರಿಸಿ ಡ್ಯಾಮಿನ ಅಕ್ಕಪಕ್ಕದ ಎರಡು ಬಾಗಿಲುಗಳನ್ನು ಹೊರತುಪಡಿಸಿ, ಉಳಿದ ಬಾಗಿಲನ್ನು ತೆರೆಯುವ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಯಿತು. ಇದರ ಪರಿಣಾಮ ತುಂಬೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಉಂಟಾಯಿತು. ಗುರುವಾರ ಸಂಜೆಯ ವೇಳೆಗೆ ೮.೭ ಮೀಟರ್ ಮಟ್ಟದಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿತ್ತು.

Leave a Comment