ಫ್ಲೆಕ್ಸ್ ತೆರವುಗೊಳಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೌರ ಕಾರ್ಮಿಕ ಸಾವು

ತುಮಕೂರು, ಅ. ೧೦- ಪ್ಲೆಕ್ಸ್ ತೆರವುಗೊಳಿಸುತ್ತಿದ್ದ ವೇಳೆ ವಿದ್ಯುತ್ ಹರಿದು ಪೌರ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಗರದಲ್ಲಿಂದು ಬೆಳಿಗ್ಗೆ ನಡೆದಿದೆ.

ಮಹಾನಗರ ಪಾಲಿಕೆಯ ಪೌರಕಾರ್ಮಿಕ ಹಾಗೂ ಶಾಂತಿನಗರ ನಿವಾಸಿ ನರಸಿಂಹಮೂರ್ತಿ (35) ಎಂಬಾತನೇ ಮೃತಪಟ್ಟಿರುವ ದುರ್ದೈವಿ.

ಕಾರ್ಯಕ್ರಮವೊಂದರ ಅಂಗವಾಗಿ ನಗರದಲ್ಲಿ ಪ್ಲೆಕ್ಸ್ ಅಳವಡಿಸಲಾಗಿತ್ತು. ಈ ಪ್ಲೆಕ್ಸ್‌ಗಳನ್ನು ಇಂದು ಬೆಳಿಗ್ಗೆ ಪಾಲಿಕೆ ಸೂಚನೆ ಮೇರೆಗೆ ತೆರವುಗೊಳಿಸುವ ಕಾರ್ಯದಲ್ಲಿ ಪೌರ ಕಾರ್ಮಿಕರು ನಿರತರಾಗಿದ್ದರು.

ನಗರದ ಟೌನ್‌ಹಾಲ್ ವೃತ್ತ ಸಮೀಪವಿರುವ ನಂಜುಂಡೇಶ್ವರ ಹೋಟೆಲ್ ಬಳಿ ಫ್ಲೆಕ್ಸ್ ತೆರವುಗೊಳಿಸುತ್ತಿದ್ದಾಗ ಪೌರ ಕಾರ್ಮಿಕ ನರಸಿಂಹಮೂರ್ತಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಆತ ಸ್ಥಳದಲ್ಲೇ ತೀವ್ರ ಅಸ್ವಸ್ಥನಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಈತನ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಇತರ ಪೌರ ಕಾರ್ಮಿಕರು ಆಟೋದಲ್ಲಿ ನರಸಿಂಹಮೂರ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ನರಸಿಂಹಮೂರ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ನೂರಾರು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಜಮಾಯಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.

ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಉದ್ಯೋಗ ನೀಡಬೇಕು ಹಗೂ ಪೌರ ಕಾರ್ಮಿಕರಿಗೆ ಸುರಕ್ಷತಾ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಾಸಕ ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಭೇಟಿ ನೀಡಿ ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನಂತರ ಪ್ರತಿಭಟನೆ ನಡೆಸುತ್ತಿದ್ದ ಪೌರ ಕಾರ್ಮಿಕರ ಬಳಿಗೆ ತೆರಳಿ ಸಮಾಧಾನ ಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

10 ಲಕ್ಷ ಪರಿಹಾರ

ಪ್ರತಿಭಟನಾಕಾರರ ಆಕ್ರೋಶವನ್ನರಿತ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ್ತು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಅವರು ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ತಕ್ಷಣಕ್ಕೆ 5 ಲಕ್ಷ ಪರಿಹಾರ ಹಾಗೂ ಸರ್ಕಾರದ 5 ಲಕ್ಷ ಪರಿಹಾರ ಸೇರಿ ಒಟ್ಟು 10 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಮೃತನ ಕುಟುಂಬದ ಒಬ್ಬರಿಗೆ ಉದ್ಯೋಗದ ಭರವಸೆಯನ್ನು ನೀಡಿದರು.

ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಈ ಭರವಸೆ ಮೇರೆಗೆ ಪೌರ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

Leave a Comment