ಫೋನ್ ಕದ್ದಾಲಿಕೆ: ಸಮಗ್ರ ತನಿಖೆಗೆ ಸಿಎಂಗೆ ಮನವಿ

ಬೆಂಗಳೂರು, ಆ. ೧೪- ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕರು, ಶಾಸಕರು ಹಾಗೂ ಕೆಲ ಪತ್ರಕರ್ತರ ದೂರವಾಣಿ ಕದ್ದಾಲಿಕೆ ಪ್ರಕರಣದ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ತಿಂಗಳ ಹಿಂದೆಯೇ ಟೆಲಿಫೋನ್ ಕದ್ದಾಲಿಕೆ ಬಗ್ಗೆ ನಾನು ಹೇಳಿದ್ದೆ. ನನ್ನ ದೂರವಾಣಿ, ಬಿಜೆಪಿ ಶಾಸಕರ ದೂರವಾಣಿ, ಕೆಲ ಪತ್ರಕರ್ತರು, ಅಷ್ಟೇ ಏಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರವಾಣಿ ಕದ್ದಾಲಿಕೆಯ ಬಗ್ಗೆಯೂ ತಿಳಿಸಿದ್ದೆ. ಈಗ ಅದು ಜಗಜ್ಜಾಹೀರಾಗಿದೆ ಎಂದರು.
ಫೋನ್ ಕದ್ದಾಲಿಕೆ ದೊಡ್ಡ ಅಪರಾಧ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿಯೂ ಅವರು ಹೇಳಿದರು.
ಫೋನ್ ಕದ್ದಾಲಿಸಿದ ಸರ್ಕಾರ ಹಾಗೂ ಮುಖ್ಯಮಂತ್ರಿ ಈಗ ಅಧಿಕಾರದಲ್ಲಿ ಇಲ್ಲ. ಏನೇ ಆದರೂ ಫೋನ್ ಕದ್ದಾಲಿಸುವುದು ಅಪರಾಧ. ಇದಕ್ಕೆ ಶಿಕ್ಷೆ ನೀಡುವ ಕಾನೂನು ಇದೆ ಎಂದರು.
ಎಲ್ಲ ವಿಚಾರಗಳ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ಗಮನ ಹರಿಸಿದ್ದಾರೆ ಎಂದು ಅವರು ತಿಳಿಸಿದರು.

Leave a Comment