ಫೋನ್ ಕದ್ದಾಲಿಕೆ ತನಿಖೆಗೆ ಆಗ್ರಹ

ಬೆಂಗಳೂರು, ಆ. ೧೪- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಶಾಸಕರು ಹಾಗೂ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಇದೀಗ ಭಾರಿ ಸದ್ದು ಮಾಡುತ್ತಿದ್ದು, ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಅನರ್ಹಗೊಂಡಿರುವ ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್ ಸೇರಿದಂತೆ ಹಲವಾರು ನಾಯಕರು ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ತನಿಖೆಗೆ ಒತ್ತಾಯಿಸುತ್ತಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ವಿರುದ್ಧ ಬಂಡೆದ್ದ ಶಾಸಕರ ಫೋನ್ ಕದ್ದಾಲಿಕೆ ಮಾಡಲಾಗಿದೆ. ಇದಕ್ಕೆ ಅಂದಿನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಸೂತ್ರಧಾರರಾಗಿದ್ದರು. ಈ ಬಗ್ಗೆ ತನಿಖೆ ನಡೆಸಬೇಕೆಂದು ಅಶೋಕ್ ಮತ್ತಿತರರು ಒತ್ತಾಯಿಸಿದ್ದಾರೆ.

ಫೋನ್ ಕದ್ದಾಲಿಕೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಶಾಸಕರು ತಂದಿದ್ದು, ಅವರು ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್. ವಿಶ್ವನಾಥ್, ರಾಜ್ಯದಲ್ಲಿ ಚುನಾಯಿತ ಪ್ರತಿನಿಧಿಗಳ ಫೋನ್ ಕದ್ದಾಲಿಕೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿಂದೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಸೇವೆಸಲ್ಲಿಸಿದ್ದೇನೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ತಮ್ಮ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಫೋನ್ ಕದ್ದಾಲಿಕೆ ಮಾಡುವುದು ಅಕ್ಷಮ್ಯ ಅಪರಾಧ, ಕಾನೂನಿನ ಪ್ರಕಾರ ಫೋನ್ ಕದ್ದಾಲಿಕೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರದ ವಿರುದ್ಧ ಬಂಡೆದಿದ್ದ ಶಾಸಕರ ಫೋನ್ ಕದ್ದಾಲಿಕೆಗಳು ನಡೆದಿದ್ದು, ತಾವೆಲ್ಲ ರಾಜೀನಾಮೆ ಕೊಡಲು ಇದೂ ಒಂದು ಕಾರಣ. ಶಾಸಕರ ಫೋನ್ ಕದ್ದಾಲಿಕೆ ನಡೆಯುತ್ತಿರುವ ಬಗ್ಗೆ ಬಿಜೆಪಿಯ ಆರ್. ಅಶೋಕ್,ಕಾಂಗ್ರೆಸ್‌ನ ಮುಖಂಡ ಹೆಚ್.ಕೆ. ಪಾಟೀಲ್ 6 ತಿಂಗಳ ಹಿಂದೆಯೇ ಸೂಕ್ಷ್ಮವಾಗಿ ತಿಳಿಸಿದ್ದರು ಎಂದು ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸರ್ಕಾರದ ವಿರುದ್ಧ ಬಂಡೆದ್ದು, ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ 17 ಶಾಸಕರ ಫೋನ್ ಕದ್ದಾಲಿಕೆಯಾಗಿದೆ. ಈ ಬಗ್ಗೆ ನಾವೆಲ್ಲರೂ ಚರ್ಚಿಸಿ ಕಾನೂನು ರೀತಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ಸ್ವಾಗತಾರ್ಹ
ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಜನರ ನೆರವಿಗೆ ಬರಬೇಕು, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಹೆಚ್ಚಿನ ನೆರವು ನೀಡಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯವರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಸಂಗತಿ. ಪರಿಹಾರ ಕಾರ್ಯಗಳಲ್ಲಿ ತಾವೂ ಸಹ ಭಾಗಿಯಾಗುತ್ತೇವೆ ಎಂದು ಗೌಡರು ಹೇಳಿರುವುದು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭರವಸೆ ನೀಡಿ ಪತ್ರ ಬರೆದಿರುವುದೂ ಮೆಚ್ಚುವಂತ ಸಂಗತಿ ಎಂದು ವಿಶ್ವನಾಥ್ ತಿಳಿಸಿದ್ದಾರೆ.

Leave a Comment