ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿದರ್ಭ ರಣಜಿ ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ವೀರೋಚಿತ ಸೋಲು

ಕೋಲ್ಕತ್ತಾ, ಡಿ.೨೧: ಪ್ರಸಕ್ತ ಸಾಲಿನ ರಣಿಜಿ ಟೂರ್ನಿಯಲ್ಲಿ ಸೋಲರಿಯದ ಸರದಾರನಂತೆ ಮುನ್ನುಗ್ಗುತ್ತಿದ್ದ ಕರ್ನಾಟಕ, ಸೆಮಿ ಫೈನಲ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿ ಫೈನಲ್ ಫೈಟ್‌ನಿಂದ ಹೊರ ನಡೆದಿದೆ. ರೋಚಕ ಹೋರಾಟಕ್ಕೆ ಸಾಕ್ಷಿಯಾದ ೨ನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ತಂಡವನ್ನು ವೀರೋಚಿತವಾಗಿ ಮಣಿಸಿದ ವಿದರ್ಭ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಗೆಲುವಿಗಾಗಿ ೧೯೮ ರನ್‌ಗಳ ಗುರಿ ಪಡೆದಿದ್ದ ಕರ್ನಾಟಕ ಅಂತಿಮ ದಿನದಾಟದಲ್ಲಿ ೫೯.೧ ಓವರ್‌ಗಳಲ್ಲಿ ೧೯೨ ರನ್‌ಗಳಿಗೆ ಆಲೌಟ್ ಆಗುವ ಮೂಲಕ ೫ ರನ್‌ಗಳ ಅಂತರದಲ್ಲಿ ಫೈನಲ್ ಆಸೆಯನ್ನು ಕೈ ಬಿಟ್ಟಿತು.

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಂತಿಮ ದಿನಾವದ ಇಂದು ಪಂದ್ಯ ಜಯಿಸಲು ಮೂರು ವಿಕೆಟ್‌ಗಳ ನೆರವಿನಿಂದ ೮೭ ರನ್‌ಗಳಿಸುವ ಸವಾಲಿನ ಗುರಿ ಕರ್ನಾಟಕದ ಮುಂದಿತ್ತು.

೧೯ ರನ್‌ಗಳಿಸಿ ನಾಯಕ ವಿನಯ್ ಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಮುಂದುವರಿಸಿದ್ದರು. ಜವಾಬ್ದಾರಿಯುತ ಆಟವಾಡುತ್ತಿದ್ದ ವಿನಯ್ ಕುಮಾರ್ ೩೬ ರನ್‌ಗಳಿಸಿದ್ದ ವೇಳೆ, ಗುರ್ಬಾನಿ ಬೌಲಿಂಗ್‌ನಲ್ಲಿ ಕೀಪರ್ ವಾಡ್ಕರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕರ್ನಾಟಕದ ಗೆಲುವಿಗೆ ಇನ್ನೂ ೫೭ ರನ್‌ಗಳ ಆವಶ್ಯಕತೆ ಇತ್ತು.

ಬಳಿಕ ಶ್ರೇಯಸ್ ಜೊತೆಗೂಡಿದ ಅಭಿಮನ್ಯು ಮಿಥುನ್ ಎಚ್ಚರಿಕೆಯ ಅಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. ೮ನೇ ವಿಕೆಟ್‌ಗೆ ೪೮ರನ್‌ಗಳ ಅತ್ಯಮೂಲ್ಯ ಜೊತೆಯಾಟವಾಡಿದ ಈ ಜೋಡಿ ಕ್ರೀಸ್‌ನಲ್ಲಿರುವಷ್ಟು ಹೊತ್ತು ಕರ್ನಾಟಕದ ಫೈನಲ್ ಆಸೆ ಜೀವಂತವಾಗಿತ್ತು. ಆದರೆ ಪಟ್ಟು ಬಿಡದ ವಿದರ್ಭ ತಂಡ, ಕೊನೆಯ ಕ್ಷಣದಲ್ಲಿ ಬೌಲಿಂಗ್‌ನಲ್ಲಿ ಮತ್ತೆ ಮೋಡಿ ಮಾಡಿತು. ೫ ಬೌಂಡರಿಗಳ ನೆರವಿನಿಂದ ೩೩ ರನ್‌ಗಳಿಸಿ ಆಡುತ್ತಿದ್ದ ಅಭಿಮನ್ಯು ಮಿಥುನ್‌ರನ್ನು ತಮ್ಮ ಮೀಡಿಯಂ ವೇಗದಲ್ಲಿ ಬಲೆಗೆ ಬೀಳಿಸಿದ ಗುರ್ಬಾನಿ ಪಂದ್ಯವನ್ನು ಮತ್ತಷ್ಟು ರೋಚಕ ಘಟ್ಟಕ್ಕೆ ಕೊಂಡೊಯ್ದರು.

೯ನೆ ವಿಕೆಟ್ ಪತನವಾದ ವೇಳೆ ಕನಾಟಕದ ಗೆಲುವಿಗೆ ೯ ರನ್ ಆವಶ್ಯಕತೆಇತ್ತು. ವಿದರ್ಭ ಗೆಲುವಿಗೆ ಬಾಕಿಯಿದ್ದಿದ್ದು ಕೂಡ ಒಂದೇ ಒಂದು ವಿಕೆಟ್. ಕೊನೆಯ ಬ್ಯಾಟ್ಸ್‌ಮನ್ ಆಗಿ ಕ್ರೀಸಿಗಿಳಿದಿದ್ದು ಕರ್ನಾಟಕದ ವೀಕೆಸ್ಟ್ ಬ್ಯಾಟ್ಸ್‌ಮನ್ ಎಸ್. ಅರವಿಂದ್. ಅದರೆ ಅದೇ ವಿದರ್ಭ ಪಾಲಿಗೆ ಸ್ಟ್ರಾಂಗೆಸ್ಟ್ ಹೋಪ್ ಆಗಿತ್ತು. ಉಮೇಶ್ ಯಾದವ್ ಬೌಲಿಂಗ್‌ನ್ನು ಹಾಗೋ ಹೀಗೋ ಎದುರಿಸಿದ ಅರವಿಂದ್ ಕೊನೆಯ ಎಸೆತದಲ್ಲಿ ಒಂಟಿ ರನ್‌ಗಾಗಿ ಓಡಿದರು. ಹಿಂದೂ ಮುಂದು ನೋಡದೆ ಮತ್ತೊಂದು ಬದಿಯಲ್ಲಿದ್ದ ಸೆಟ್ ಬ್ಯಾಟ್ಸ್‌ಮನ್ ಶ್ರೇಯಸ್ ಕೂಡ ಸಿಂಗಲ್‌ಗಾಗಿ ಓಡಿದರು.

ಆದರೇ ಇದೇ ಕರ್ನಾಟಕದ ಪಾಲಿಗೆ ಮುಳುವಾಯಿತು. ಮುಂದಿನ ಓವರ್ ಎಸೆಯಲು ಬಂದ ಗುರ್ಬಾನಿ ಮೊದಲ ಎಸೆತದಲ್ಲೇ ಅರವಿಂದ್ ವಿಕೆಟ್ ಪಡೆದು ವಿದರ್ಭ ತಂಡವನ್ನು ಚೊಚ್ಚಲ ಬಾರಿಗೆ ಫೈನಲ್‌ಗೆ ಕೊಂಡೊಯ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ೧೯೮ ರನ್‌ಗಳ ಗೆಲುವಿನ ಗುರಿ ಪಡೆದಿದ್ದ ಕರ್ನಾಟಕಕ್ಕೆ ಮಾರಕವಾಗಿ ಎರಗಿದ್ದು, ವಿದರ್ಭ ಬೌಲರ್ ರಜನೀಶ್ ಗುರ್ಬಾನಿ. ೨೩. ೧ ಓವರ್‌ಗಳ ಜೀವನ ಶ್ರೇಷ್ಟ ಬೌಲಿಂಗ್ ದಾಳಿಯಲ್ಲಿ ೬೮ ರನ್ ನೀಡಿ  ೭ ವಿಕೆಟ್ ಪಡೆದು ವಿದರ್ಭ ಪಾಲಿಗೆ ಹೀರೋ ಆದರು. ಅರ್ಹವಾಗಿ ಪಂದ್ಯಶ್ರೆಷ್ಟ ಪ್ರಶಸ್ತಿಯೂ ಗುರ್ಬಾನಿಗೆ ಒಲಿಯಿತು. ಮತ್ತೊಂದೆಡೆ ರೋಚಕ ಹೋರಾಟ ನಡೆಸಿಯೂ ಕೇವಲ ೫ ರನ್‌ಗಳಿಂದ ಪಂದ್ಯ ಸೋತ ೮ ಬಾರಿಯ ಚಾಂಪಿಯನ್ ಕರ್ನಾಟಕ, ೫ ವರ್ಷದಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಸಾಧನೆಯಿಂದ ಸ್ವಲ್ಪದರಲ್ಲಿಯೇ ವಂಚಿತವಾಯಿತು.

Leave a Comment