ಫೆ. 23 ರಂದು ಭಾರತ ಬಂದ್ ಗೆ ಬೆಂಬಲ- ಬಿಳಾರ

ಹುಬ್ಬಳ್ಳಿ, ಫೆ.20- ಬಡ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ಇದರ ವಿರುದ್ಧ ಫೆ.23 ರಂದು ಭಾರತ ಬಂದ್ ಗೆ ಕರೆಕೊಡಲಾಗಿದೆ. ಇದಕ್ಕೆ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಬೆಂಬಲ ಸೂಚಿಸಲಿವೆ ಎಂದು ಪಿತಾಂಬ್ರಪ್ಪ ಬಿಳಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ನೌಕಕರಿಗೆ, ಸರಕಾರಿ ನೌಕರಿಯ ಬಡ್ತಿ ಮೀಸಲಾತಿಯು ಮೂಲಭೂತವಾದ ಹಕ್ಕಲ್ಲ ಎಂದು ತೀರ್ಪು ನೀಡಿ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿರುವ ವಿಷಯವೆಂಬುದಾಗಿ ತಿಳಿಸುವ ಮೂಲಕ ಶೋಷಿತ ಸಮುದಾಯದವರು ಉನ್ನತ ಹುದ್ದೆಗೆ ತಲುಪುವ ವಿಷಯಕ್ಕೆ ತೀವ್ರವಾದ ಕೊಡಲಿ ಏಟು ಕೊಟ್ಟಿದ್ದು, ಇದನ್ನು ವಿರೋಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರು ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲದೇ ಸುಗ್ರೀವಾಜ್ಞೆಯನ್ನು ಹೊರಡಿಸಿ ದಲಿತರ ಹಕ್ಕನ್ನು ಉಳಿಸಬೇಕೆಂದು ಭಾರತ ಬಂದ್ ಗೆ ಕರೆನೀಡಿದ್ದು, ಇದಕ್ಕೆ ಹುಬ್ಬಳ್ಳಿಯಲ್ಲಿಯೂ ಬೆಂಬಲ ಸೂಚಿಸಲಾಗುತ್ತಿದೆ ಎಂದರು.
ಇನ್ನೂ ಫೆ.23 ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಶಾಂತಿಯುತ ಬಂದ್ ಆಚರಣೆ ಮಾಡಲಾಗುತ್ತಿದ್ದು, ಮಹಾಮಂಡಳ ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ಆಟೋ ಕ್ಯಾಬ್ ಚಾಲಕರ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಪೌರ ಕಾರ್ಮಿಕರ ಸಂಘ, ವ್ಯಾಪಾರಸ್ಥರ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುರುನಾಥ ಉಳ್ಳಿಕಾಶಿ, ವೆಂಕಟೇಶ ಮೇಸ್ತ್ರಿ, ಗಣೇಶ ಟಗರಗುಂಟಿ, ರೇವಣಸಿದ್ದಪ್ಪ ದೇಸಾಯಿ ಸೇರಿದಂತೆ ಮುಂತಾದವರು ಇದ್ದರು.

Leave a Comment