ಫೆ. 19 ರಂದು ನಿವೃತ್ತ ನೌಕರರ ಱ್ಯಾಲಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ ೨೨- ನಗದು ರಹಿತ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಪಿಂಚಣಿ ಹೆಚ್ಚಳ ಪ್ರಯಾಣ ದರದಲ್ಲಿ ರಿಯಾಯಿತಿ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಫೆಬ್ರವರಿ 19 ರಂದು ಸರ್ಕಾರಿ ನಿವೃತ್ತ ನೌಕರರ ನಡೆ ವಿಧಾನಸೌಧದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಱ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಅವರು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಬರಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ನಿವೃತ್ತ ನೌಕರರ ಬೇಡಿಕೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದ್ದರೂ ಇಲ್ಲಿಯತನಕ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಾಳಿವೆ. ಈ ಸಂಬಂಧ ಜ 10 ರಂದು ಬೆಂಗಳೂರಿನಲ್ಲಿ ನ‌ಡೆದ ರಾಜ್ಯ ಪರಿಷತ್ ಮಹಾ ಸಭೆಯಲ್ಲಿ ಕೂಲಂಕೂಷವಾಗಿ ಚರ್ಚಿಸಿ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ವಿಧಾನಸೌಧ ಚಲೋ ಸರ್ಕಾರಿ ನಿವೃತ್ತಿ ನೌಕರರ ನಡೆ ವಿಧಾನಸೌಧದ ಕಡೆ ಎಂಬ ಬೃಹತ್ ಱ್ಯಾಲಿಯನ್ನು ಫೆ 19 ರಂದು ಬೆಳಿಗ್ಗೆ 10 ಗಂಟೆಗೆ ರೈಲ್ವೆ ನಿಲ್ದಾಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಆಯೋಜಿಸಲಾಗಿದೆ ಎಂದು ಹೇಳಿದರು.
ನೆರೆ ರಾಜ್ಯಗಳ ಮಾದರಿಯಲ್ಲಿ ಸರ್ಕಾರಿ ನಿವೃತ್ತಿ ನೌಕರರ ಮೂಲ ಪಿಂಚಣಿ ಹೆಚ್ಚಳ, ಆಯುಷ್ಮಾನ್ ಭಾರತ್ ಆರೋಗ್ಯ ಭಾಗ್ಯ ಕರ್ನಾಟಕ ಎಂಬ ಸರ್ಕಾರಿ ಆದೇಶ ನಿವೃತ್ತಿ ನೌಕರರಿಗೂ ನಗದು ರಹಿತ ಯೋಜನೆ ಜಾರಿ ಮಾಡುವುದು, ಶವ ಸಂಸ್ಕಾರಕ್ಕೆ ಭತ್ಯೆ, ಸಂಘಕ್ಕೆ ನಿವೇಶನ ಮಂಜೂರು, ಆದಾಯ ತೆರಿಗೆಯಿಂದ ವಿನಾಯಿತಿ, ಶೈಕ್ಷಣಿಕ ಉದ್ದೇಶಕ್ಕೆ ಬಡ್ಡಿ ರಹಿತ ಸಾಲ ಮಂಜೂರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಮತ್ತಿತರರು ಉಪಸ್ಥಿತರಿದ್ದರು.

Leave a Comment