ಫೆ. 14, 21 ರಂದು ರಾಜ್ಯದಲ್ಲಿ ಅಮಿತ್ ಶಾ

ಬೆಂಗಳೂರು, ಫೆ. ೧೨- ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, 2 ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಸಾರ್ವಜನಿಕ ಸಭೆಯ ಮೂಲಕ ರಣಕಹಳೆ ಮೊಳಗಿಸಿರುವ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಈ ತಿಂಗಳು 2 ದಿನ ರಾಜ್ಯಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆಯ ಸಂಬಂಧ ಕಾರ್ಯಕರ್ತರ ಸಮಾವೇಶಗಳಲ್ಲಿ ಪಾಲ್ಗೊಳ್ಳುವರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಇದೇ ತಿಂಗಳ 14 ಮತ್ತು 21 ರಂದು ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಈ ತಿಂಗಳ 14 ರಂದು ರಾಜ್ಯಕ್ಕೆ ಆಗಮಿಸುವ ಅಮಿತ್ ಷಾರವರು ರಾಯಚೂರಿನ ಸಿಂಧನೂರಿನಲ್ಲಿ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಅದೇ ದಿನ ಸಂಜೆ ಬಳ್ಳಾರಿಯ ಹೊಸಪೇಟೆಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲೂ ಅಮಿತ್ ಷಾ ಪಾಲ್ಗೊಳ್ಳುವರು.
ಮತ್ತೆ ಈ ತಿಂಗಳ 21 ರಂದು ರಾಜ್ಯಕ್ಕೆ ಭೇಟಿ ನೀಡುವ ಅಮಿತ್ ಷಾರವರು ಚಿಕ್ಕಬಳ್ಳಾಪುರದಲ್ಲಿ ಶಕ್ತಿಕೇಂದ್ರದ ಪ್ರಮುಖರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡುವರು. ಅದೇ ದಿನ ಸಂಜೆ ನಗರದ ಯಲಹಂಕದಲ್ಲಿ ಆಯೋಜಿಸಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ರಾಜ್ಯ ಬಿಜೆಪಿ ನಾಯಕರು ತಿಳಿಸಿದ್ದಾರೆ.

Leave a Comment