ಫೆ.14ರಿಂದ 19ರವರೆಗೆ ‘ಬಹುರೂಪಿ ಅಂತರರಾಷ್ಟ್ರೀಯ ನಾಟಕೋತ್ಸವ’

ಮೈಸೂರು,ಜ.20:- ರಂಗಾಯಣದ ಬಹುಮುಖಿ ಉತ್ಸವ ‘ಬಹುರೂಪಿ’ಯು 2020 ಫೆಬ್ರವರಿ 13 ರಂದು ಜನಪದ ಉತ್ಸವದಿಂದ ಪ್ರಾರಂಭಗೊಂಡು 14 ರಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಫೆ. 19 ರವರೆಗೆ ‘ಗಾಂಧಿ ಪಥ’ ವಿಷಯವನ್ನಾಧರಿಸಿ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಂಗಾಯಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು ಈ ನಾಡಿನ ಹೆಮ್ಮೆ, ಆಧುನಿಕ ರಂಗಭೂಮಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಇಂಪನ್ನು ಮೂಡಿಸಿರುವ ರಂಗಾಯಣದ ಬಹುಮುಖ ಉತ್ಸವ ‘ಬಹುರೂಪಿ’. ನಮ್ಮ ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾಮುಖಿಯಾಗಿಸುವ, ಬಹುಕಲಾರೂಪಗಳನ್ನು ಒಂದು ವಾರಗಳ ಕಾಲ ದರ್ಶನಗೊಳಿಸುವುದೇ ‘ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-2020’, ಇಂದು ಈ ಬಹುರೂಪಿ ರಾಷ್ಟ್ರೀಯವಲ್ಲ, ಅಂತರರಾಷ್ಟ್ರೀಯ ಮನ್ನಣೆಗಳಿಸಿರುವ ಶಿಸ್ತಿನ ನಾಟಕೋತ್ಸವ ಹಾಗಾಗಿ ಇದು ಕನ್ನಡ ನಾಡಿನ ವಿವಿಧ ಭಾಷೆ, ಶೈಲಿಯ ನಾಟಕಗಳ ಗರಿಮೆ, ಭಾರತೀಯ ರಂಗಭೂಮಿಯ ಪ್ರಯೋಗಶೀಲತೆ, ವೃತ್ತಿಪರ ಗುಣಮಟ್ಟವನ್ನು ಪರಿಶೀಲಿಸಿ, ಭಾರತೀಯ ನಾಟಕಗಳು ಬಹುರೂಪಿ-2020ರಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದರು.
ಇದರೊಂದಿಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ವಸ್ತು, ಕರಕುಶಲಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಶಿ, ಕಲೆ-ಸಂಸ್ಕೃತಿ, ಸಂಗತಿಗಳು ಘಟಿಸುತ್ತವೆ. ಈ ಬಹುರೂಪಿ-2020ನ್ನು ನಾಡಿನ ಸಂತ, ಮಹಾತ್ಮ ಗಾಂಧೀಜಿಗೆ ಅರ್ಪಿಸುತ್ತಿದ್ದೇವೆ. ಮಹಾತ್ಮರ 150 ನೇ ವರ್ಷಾಚರಣೆಯು ನಡೆಯುವ ಈ ಸಂದರ್ಭದಲ್ಲಿ ಅರ್ಥಪೂರ್ಣವೂ ಹೌದು. 2020 ಫೆಬ್ರವರಿ 13 ರಂದು ಜನಪದ ಉತ್ಸವ ಪ್ರಾರಂಭಗೊಂಡು 14 ರಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಧಿಕೃತವಾಗಿ ಉದ್ಘಾಟನೆಗೊಂಡು, 19 ರವರೆಗೆ ನಡೆಯುವ ಈ ಬಾರಿಯ ಉತ್ಸವ ‘ಗಾಂಧಿ ಪಥ’ ಎಂಬ ವಿಷಯವನ್ನು ಆಧರಿಸಿದೆ. ‘ಗಾಂಧೀಯೇ ಒಂದು ರೀತಿಯಲ್ಲಿ ಬಹುರೂಪಿ’ ಎಂದು ತಿಳಿಸಿದರು.
ಆಧುನಿಕ ಸಾಹಿತ್ಯ-ರಂಗಭೂಮಿಯಲ್ಲಿ ಗಾಂಧಿಯ ನಿಜ ದಕ್ಕದೇ ಹೋಗಿದೆಯೇ ಎಂದು ಹಲುಬುವುದನ್ನು ಕೇಳುತ್ತಿದ್ದೇವೆ. ವರ್ಷ ಕಳೆದಂತೆ ಮಾಗುತ್ತಲೇ ಹೋಗುವ ಗಾಂಧಿಯ ಸತ್ಯ ನಮ್ಮ ಆಧುನಿಕ ನಾಟ್ಯ (ರಂಗಭೂಮಿ) ಪರಂಪರೆಗೆ ದಕ್ಕಬೇಕು. ಗಾಂಧಿಯ ಸತ್ಯ-ಅಹಿಂಸೆ ಇಂದು ವಿರೋಧ ಭಾಸವಾಗಿ ಕಂಡರೂ ಅದುವೇ ನಿಜವಲ್ಲ, ಉಪ್ಪು-ಚರಕ-ಪ್ರಾರ್ಥನೆ, ಬಡತನ-ಶ್ರಮ-ವಿನಯ ಕೂಡ ಆಗಬಹುದಲ್ಲವೆ? ಗಾಂಧಿ ಎಂದಾಕ್ಷಣ ಸತ್ಯ, ಅಹಿಂಸೆ, ಸಹಿಷ್ಣುತೆ, ಸಮಾನತೆ, ಸ್ವಚ್ಛತೆ, ಶ್ರಮ, ಮಹಿಳಾ ಸಬಲೀಕರಣ, ರಾಜಕೀಯ, ಆಧ್ಯಾತ್ಮಿಕ ಎಲ್ಲವೂ ಕಣ್ಣ ಮುಂದೆ ಹಾದು ಹೋಗುತ್ತದೆ. ಇಲ್ಲಿ ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕುವುದು ನಮ್ಮ ಗುರಿ ಮತ್ತು ಉದ್ದೇಶ. ರಾಷ್ಟ್ರಪಿತನಿಂದ ರಾಷ್ಟ್ರಪಥದತ್ತ ಒಂದು ಪುಟ್ಟ ಹೆಜ್ಜೆ. ‘ಗಾಂಧಿ ಪಥ’ಕ್ಕೆ ಪೂರಕವಾಗುವ ನಮ್ಮ ಹಿರಿಯ ರೆಪರ್ಟರಿ ಕಲಾವಿದರ ‘ಗಾಂಧಿ ವರ್ಸಸ್ ಗಾಂಧಿ ನಾಟಕ. ಮೈಸೂರು ಹವ್ಯಾಸಿ ಕಲಾವಿದರಿಂದ ‘ಮಹಾತ್ಮ’ನಾಟಕವನ್ನು ಹವ್ಯಾಸಿ ನಿರ್ದೇಶಕರಿಂದಲೇ ರಂಗಾಯಣವೇ ಸಿದ್ಧಪಡಿಸುತ್ತಿದೆ. ಗಾಂಧಿ ಲಾವಣಿ, ಭಜನೆಗಳು, ತತ್ವಪದ ಗಾಯನ, ಭಿತ್ತಿಪತ್ರ ಪ್ರದರ್ಶನ, ಚಲನಚಿತ್ರೋತ್ಸವ ಎಲ್ಲವೂ ಬಹುರೂಪಿಯಲ್ಲಿ ರಿಂಗಣಿಸಲಿದೆ ಎಂದರು.
2020 ಫೆಬ್ರವರಿ 13 ರಂದು ಸಂಜೆ 5ಗಂಟೆಗೆ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರೇ ಚಾಲನೆ ನೀಡುವ ಮೂಲಕ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ-2020ಕ್ಕೆ ನಾಂದಿ ಹಾಡಲಿದ್ದು, ಫೆ.14ರಂದು ಬೆಳಿಗ್ಗೆ 10ಗಂಟೆಗೆ ಶ್ರೀರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಬಹುರೂಪಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 5.30ಕ್ಕೆ ವನರಂಗ ವೇದಿಕೆಯಲ್ಲಿ ಬಹುರೂಪಿ ನಾಟಕೋತ್ಸವ ಉದ್ಘಾಟನೆಯನ್ನು ಹಿರಿಯ ರಂಗ ಕಲಾವಿದ ಖ್ಯಾತ ಚಲನಚಿತ್ರ ನಟ ಅನಂತ್ ನಾಗ್ ನೆರವೇರಿಸಲಿದ್ದು, ಉತ್ಸವದ ಪರಿಚಯ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸಿ.ಟಿ. ರವಿ ಅವರು ಬಿಡುಗಡೆ ಮಾಡಲಿದ್ದಾರೆ. ಬಹುರೂಪಿಯ ಪುಸ್ತಕ ಮೇಳ ಮತ್ತು ಕರಕುಶಲ ಮೇಳವನ್ನು ವಸತಿ ಸಚಿವ ವಿ. ಸೋಮಣ್ಣನವರು ಉದ್ಘಾಟಿಸಲಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಘಾಟನೆಯ ನಂತರ ಅದೇ ವನರಂಗ ವೇದಿಕೆಯಲ್ಲಿ ನಾಡಿನ ಸುಪ್ರಸಿದ್ಧ ಗಾಯಕಿ ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಮೀರಾ ಭಜನ್ ಗಾಯನ ಕಾರ್ಯಕ್ರಮವಿದೆ. ನಂತರ ರಾತ್ರಿ 8ಕ್ಕೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಾಯೋಜಿತ ದೊಡ್ಡಾಟ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಫೆಬ್ರವರಿ 16 ಮತ್ತು 17 ರಂದು ಗಾಂಧಿ ಪಥ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಫೆಬ್ರವರಿ 16 ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಕವಿ, ಚಿಂತಕ ದಲಿತ ಕವಿ ಸಿದ್ದಲಿಂಗಯ್ಯನವರು ನೆರವೇರಿಸಲಿದ್ದಾರೆ. ಎರಡು ದಿನಗಳ ಈ ಗೋಷ್ಠಿಯಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.
ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡ ನಾಟಕಗಳ ಹಾಗೂ ಭಾರತೀಯ ಇತರೆ ಭಾಷೆಗಳ ನಾಟಕಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಹುರೂಪಿಯ ವಿನ್ಯಾಸ ಮತ್ತು ನಾಟಕಗಳು, ಚಲನಚಿತ್ರಗಳ ಪೂರ್ಣ ವಿವರಗಳನ್ನು ಒಳಗೊಂಡ ಭಿತ್ತಿಚಿತ್ರವನ್ನು 29-01-2020 ರಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬಿಡುಗಡೆಗೊಳಿಸಲಿದ್ದಾರೆ. ಈ ಬಾರಿ ಕನ್ನಡ ನಾಡಿನ ವಿವಿಧ ಭಾಗಗಳ ದೇಸಿ ಆಹಾರ ಮಳಿಗೆಗಳನ್ನು ಅಳವಡಿಸುವ ಚಿಂತನೆ ನಡೆದಿದ್ದು, ‘ಗಾಂಧಿಪಥ’ದ ಚಿಂತನೆಗಳನ್ನು ಆಧರಿಸಿ ಕರಕುಶಲ ವಸ್ತು ಪ್ರದರ್ಶನ, ಪುಸ್ತಕ ಮಳಿಗೆಗಳು ಇರುತ್ತವೆ. ಬಹುರೂಪಿ-2020ಕ್ಕೆ ಮೈಸೂರಿನ ಹವ್ಯಾಸಿ ರಂಗ ಸಂಘಟನೆ ಮತ್ತು ಕಲಾವಿದರನ್ನು ಉತ್ಸವದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಹವ್ಯಾಸಿ ರಂಗ ನಿರ್ದೇಶಕರಿಂದಲೇ ಗಾಂಧಿ ಕಲಾವಿದರಿಗೆ ನಿರ್ದೇಶನ ಮಾಡಿಸುತ್ತಿದ್ದು, ಸ್ಥಳೀಯ ಹವ್ಯಾಸಿ ರಂಗತಂಡಗಳಿಗೆ ಆದ್ಯತೆ ನೀಡಿದ್ದೇವೆ. ಈ ಬಹುರೂಪಿ 2020ಕ್ಕೆ ವಿವಿಧ ಸಮಿತಿಗಳನ್ನು ರಚಿಸಿ, ನಾಟಕೋತ್ಸವ ಯಶಸ್ವಿಗೊಳಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ, ರಾಮನಾಥ್, ರಂಗಭೂಮಿ ಕಲಾವಿದ ಪ್ರಶಾಂತ್ ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.

Leave a Comment