ಫೆ.೩-೪: ಒಡಿಯೂರಿನಲ್ಲಿ ತುಳುನಾಡ ಜಾತ್ರೆ-ರಥೋತ್ಸವ

ವಿಟ್ಲ, ಫೆ.೨- ಇಹದಿಂದ ಪರವನ್ನು ಸೇರಲು ದೇಹ ಎಂಬ ರಥ ಎಳೆಯುವ ಅಗತ್ಯವಿದೆ. ಜಾತ್ರೆ ಜೀವನ ಯಾತ್ರೆಗೆ ಸಂದೇಶವಾಗಬೇಕು. ಉತ್ಸವಗಳ ಮೂಲಕ ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕಾರ್ಯಕ್ರಮಗಳು ಸುಸಂಸ್ಕೃತ ಬದುಕು ನಿರ್ಮಾಣಕ್ಕೆ ಬೆಳಕಾಗಬೇಕು. ಪಾಶ್ಚಿಮಾತ್ಯದ ಗಾಳಿಗೆ ಸ್ಥಳೀಯ ಸಂಸ್ಕೃತಿ ನಶಿಸಬಾರದು. ಹೊರೆಕಾಣಿಕೆಯ ಮೂಲಕ ಕ್ಷೇತ್ರದಲ್ಲಿ ಧಾನ್ಯ ಸಿರಿ ಸಂಪನ್ನತೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.೩ ಮತ್ತು ೪ರಂದು ನಡೆಯುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಒಂದು ದಿನವನ್ನು ತುಳುವಿನ ಬಗ್ಗೆ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು, ೨೦ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇನ್ನೊಂದು ದಿನ ಎರಡು ಗ್ರಾಮಗಳಲ್ಲಿ ೧೨ ಕಿ.ಮೀ. ಸಂಚರಿಸುವ ರಥೋತ್ಸವ ನಡೆಯಲಿದೆ. ತುಳುನಾಡು ವಿಶೇಷ ಹಾಗೂ ವಿಶಿಷ್ಟತೆಯಿಂದ ಕೂಡಿದ್ದಾಗಿದೆ. ತುಳುನಾಡ ಜಾತ್ರೆಯಲ್ಲಿ ಸಾಹಿತ್ಯದ ಜತೆಗೆ ಸಂಗೀತ, ನೃತ್ಯ, ಚಿತ್ರಕಲೆಯನ್ನು ಸೇರಿಸುವ ಮೂಲಕ ಜನರಿಗೆ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಪುಣೆ ಶ್ರೀ ಗುರುದೇವ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಒಡಿಯೂರು ಶ್ರೀ ಗುರುದೇವ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಮುಂಬಯಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮ ರೈ,ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ, ಪ್ರಚಾರ ಸಮಿತಿ ಸಂಚಾಲಕ ಅಜಿತ್ ನಾಥ್ ಶೆಟ್ಟಿ, ಸುಳ್ಯ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪಕಳ, ಮಾಜಿ ಅಧ್ಯಕ್ಷ ಶಾಂತಪ್ಪ ರೈ, ಯಶವಂತ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

Leave a Comment