ಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭ

ಬೆಳಗಾವಿ, ಜನವರಿ 14 : ಬೆಳಗಾವಿ-ಪುಣೆ ನಡುವೆ ನೇರ ರೈಲು ಸೌಕರ್ಯ ಒದಗಿಬೇಕು ಎಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಜನಶತಾಬ್ದಿ ರೈಲು ಉಭಯ ನಗರಳ ನಡುವೆ ಸಂಚಾರ ನಡೆಸಲಿದ್ದು, ಇದನ್ನು ಹುಬ್ಬಳ್ಳಿ ತನಕ ವಿಸ್ತರಣೆ ಮಾಡುವ ಚಿಂತನೆಯೂ ಇದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ತವರು ಜಿಲ್ಲೆಗೆ ಹೊಸ ವರ್ಷದ ಕೊಡುಗೆ ನೀಡಿದ್ದಾರೆ. ಫೆಬ್ರವರಿಯಲ್ಲಿ ಉಭಯ ನಗರಗಳ ನಡುವೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ರೈಲು ಸಂಚಾರದ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ಸಿದ್ಧಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 9ರಿಂದ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ. ಬಸ್ ಪ್ರಯಾದರವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಪ್ರಯಾಣದರವನ್ನು ನಿಗದಿ ಮಾಡಲಾಗುತ್ತದೆ.
ತಾತ್ಕಾಲಿಕವಾಗಿ ಸಿದ್ಧಪಡಿಸಲಾದ ವೇಳಾಪಟ್ಟಿ ಅನ್ವಯ ರೈಲು ಬೆಳಗ್ಗೆ 6ಕ್ಕೆ ಪುಣೆಯಿಂದ ಹೊರಡುವ ರೈಲು ಮಧ್ಯಾಹ್ನ 2ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿ-ಪುಣೆ ನಡುವಿನ ರೈಲು ಮಾರ್ಗದ ಅಂತರ 416 ಕಿ. ಮೀ.ಗಳು.
ಪ್ರಸ್ತುತ ಬೆಂಗಳೂರು, ಹುಬ್ಬಳ್ಳಿಯಿಂದ ಸಂಚಾರ ನಡೆಸುವ ಕೆಲವು ರೈಲುಗಳು ಬೆಳಗಾವಿ ಮೂಲಕ ಪುಣೆಗೆ ಸಂಪರ್ಕ ಕಲ್ಪಿಸುತ್ತವೆ. ಬೆಳಗಾವಿ-ಪುಣೆ ನಡುವೆ ಪ್ರತ್ಯೇಕವಾದ ರೈಲು ಇಲ್ಲ. ಪ್ರಯಾಣಿಕರು ಬಸ್‌ನಲ್ಲಿಯೇ ಪ್ರಯಾಣಿಸಬೇಕು. ದರ ಸಹ ದುಬಾರಿಯಾಗಿದೆ.

ಬೆಳಗಾವಿ-ಪುಣೆ ರೈಲನ್ನು ಹುಬ್ಭಳ್ಳಿಯ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ಆದರೆ, ರೈಲ್ವೆ ಇಲಾಖೆ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. ಹುಬ್ಬಳ್ಳಿ-ಬೆಳಗಾವಿ ನಡುವೆ ಪ್ರತಿನಿತ್ಯ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತದೆ.

Leave a Comment