‘ಫೆಬ್ರವರಿಯಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ’

ಉಜಿರೆ, ಸೆ.೧೧- ನಾಡಿನ ಪವಿತ್ರ ಯಾತ್ರಾಸ್ಥಳ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ೨೦೧೯ರ ಫೆಬ್ರವರಿ ತಿಂಗಳಿನಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.
ಅವರು ನಿನ್ನೆ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ಸಿದ್ಧತೆಗಳ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿರುವ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರು ಹಾಗೂ ಪುಷ್ಪದಂತ ಸಾಗರ ಮುನಿಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಸರಳವಾಗಿ ಮಸ್ತಕಾಭಿಷೇಕ ನಡೆಯಲಿದೆ. ರಾಜ್ಯಮಟ್ಟದಲ್ಲಿ ಸರಳವಾಗಿ ಮಸ್ತಕಾಭಿಷೇಕ ನಡೆಸಲು ಉದ್ದೇಶಿಸಿದ್ದು ಉತ್ತರ ಭಾರತದವರನ್ನೂ ಆಮಂತ್ರಿಸಲಾಗುವುದು. ರಾಜ್ಯದ ಎಲ್ಲಾ ಜೈನಮಠಗಳ ಭಟ್ಟಾರಕರುಗಳನ್ನೂ ಆಹ್ವಾನಿಸಲಾಗುವುದು.
ಪಂಚಕಲ್ಯಾಣದ ಬಳಿಕ ಮೂರು ದಿನ ನಿರಂತರ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಮುಂದೆ ಪ್ರತಿ ವಾರ ಶನಿವಾರ ಮತ್ತು ಭಾನುವಾರ ಮಸ್ತಕಾಭಿಷೇಕ ನಡೆಯುತ್ತದೆ. ಮಹಿಳೆಯರು ಹಾಗೂ ಯುವಜನತೆ ಮಸ್ತಕಾಭಿಷೇಕದಲ್ಲಿ ಸಕ್ರಿಯವಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಬೆಂಗಳೂರಿನ ಭಾರತೀಯ ಜೈನ್ ಮಿಲನ್ ಉಪಾಧ್ಯಕ್ಷ ಎಂ.ಎಸ್. ಮೃತ್ಯುಂಜಯ, ಹುಬ್ಬಳ್ಳಿಯ ದತ್ತಾ ದೋರ್ಲೆ, ಬೆಳಗಾವಿಯ ರಾಜು ದೊಡ್ಡಣ್ಣವರ್, ಪ್ರೇಮ್ ಕುಮಾರ್ ಜೈನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಂಗಳೂರಿನ ಡಾ. ಸಿ.ಕೆ. ಬಳ್ಳಾಲ್, ಬೆಂಗಳೂರಿನ ಕರ್ನಾಟಕ ಜೈನ್ ಅಸೋಸಿಯೇಶನ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಮತ್ತು ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ಮಾತನಾಡಿ ಪೂರ್ಣ ಸಹಕಾರ, ಬೆಂಬಲ ಕೊಡುವ ಭರವಸೆ ನೀಡಿದರು.
ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕರಾಗಿ ಡಿ. ಸುರೇಂದ್ರ ಕುಮಾರ್, ಸಂಚಾಲಕರಾಗಿ ಡಿ. ಹರ್ಷೇಂದ್ರ ಕುಮಾರ್ ಹಾಗೂ ಕೆ. ಮಹಾವೀರ ಅಜ್ರಿ ಮತ್ತು ಎ.ವಿ. ಶೆಟ್ಟಿ ಅವರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಡಾ. ಟಿ. ನಾಗಕುಮಾರ ಶೆಟ್ಟಿ, ಶ್ರೇಯಸ್ ಡಿ. ಆನಡ್ಕ ದಿನೇಶ್ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಶಿಶಿರ್ ಇಂದ್ರ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಬಾಹುಬಲಿ ಸ್ವಾಮಿಯ ಪ್ರಾರ್ಥನೆ ಹಾಡಿದರು.
ಪ್ರೊ. ಎಸ್. ಪ್ರಭಾಕರ್ ಸ್ವಾಗತಿಸಿದರು. ಕೆ. ಮಹಾವೀರ ಅಜ್ರಿ ಧನ್ಯವಾದವಿತ್ತರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ (ಡಿ. ವೀರೇಂದ್ರ ಹೆಗ್ಗಡೆಯವರ ತಂದೆ-ತಾಯಿ) ಇಚ್ಛಾಶಕ್ತಿಯಂತೆ ಕಾರ್ಕಳದಲ್ಲಿ ಬಾಹುಬಲಿ ಮೂರ್ತಿಯ ಕೆತ್ತನೆ ಪ್ರಾರಂಭಿಸಲಾಯಿತು.
ಧರ್ಮಸ್ಥಳದಲ್ಲಿ ಮೂರ್ತಿಯ ಪ್ರತಿಷ್ಠಾಪಕರು ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು.
ಮೂರ್ತಿಯ ಶಿಲ್ಪಿ ರೆಂಜಾಳ ಗೋಪಾಲ ಶೆಣೈ
ಪ್ರತಿಷ್ಠಾಪನೆ ಮತ್ತು ಪ್ರಥಮ ಮಹಾಮಸ್ತಕಾಭಿಷೇಕ:೧೯೮೨
೧೯೯೪, ೨೦೦೭ರಲ್ಲಿ ಎರಡನೆ ಮತ್ತು ಮೂರನೆ ಮಹಾಮಸ್ತಕಾಭಿಷೇಕ ನಡೆಯಿತು.
೨೦೧೯ರಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ
ಪ್ರತಿ ವರ್ಷ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯುತ್ತದೆ.
ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.

Leave a Comment