ಫಿಲ್ಮ್ ಫೇರ್‌ನಲ್ಲಿ ಕನ್ನಡಕ್ಕೆ ಪ್ರಶಸ್ತಿಗಳ ಸುರಿಮಳೆ : ಮಾನ್ವಿತಾ, ಯಶ್ ಶ್ರೇಷ್ಠ ನಟಿ, ನಟ

ದಕ್ಷಿಣ ಭಾರತದ ದಿಗ್ಗಜ ನಟ-ನಟಿಯರ ಸಮಾಗಮವೇ ಅಲ್ಲಿ ಜಮಾಯಿಸಿತ್ತು. ಸುಂದರ ಸಂಜೆಯಲ್ಲಿ ಕಣ್ಣು ಕೊರೈಸುವ ವೇದಿಕೆಯಲ್ಲಿ ಮೂಡಿ ಬಂತು. ಅದ್ದೂರಿ ಸಮಾರಂಭ ಕಿವಿಗಡಚಿಕ್ಕುವ ಚಪ್ಪಾಳೆಯ ಮಧ್ಯೆ ಪ್ರಕಟವಾಯಿತು. ಪ್ರಶಸ್ತಿಗಳ ಸುರಿಮಳೆ. ಇಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣ ಅದೇನೂ ಅಂತೀರಾ. 66ನೇ ಯಮಾಹಾ ಫ್ಯಾಸಿನೋ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡಿದ ಕೆಜಿಎಫ್, ಟಗರು ಹಾಗೂ ನಾತಿ ಚರಾಮಿ, ಸೇರಿದಂತೆ ಇತರ ಚಿತ್ರಗಳು ಪ್ರಶಸ್ತಿ ಬಾಚಿಕೊಂಡು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಿಗೆ ಸಡ್ಡು ಹೊಡೆಯುವಲ್ಲಿ ಸಫಲವಾಯಿತು.

manvitha-kamath

ಕೆಂಪು ಹಾಸಿನ ಮೇಲೆ ಅತ್ಯಂತ ಮನಮೋಹಕ ಹಾಗೂ ವಿನೂತನ ಶೈಲಿಯಲ್ಲಿ ಆಗಮಿಸಿದ್ದ ಚಲನಚಿತ್ರೋದ್ಯಮದ ಗಣ್ಯರು ಆಗಮನವಾಗುತ್ತಿದ್ದಂತೆ ತಾರಾಲೋಕವೇ ಅನಾವರಣಗೊಂಡಿತು. ಮಿರಿ ಮಿರಿ ಮಿಂಚುವ ಬಂಗಾರದ ಧಿರಿಸು ತೊಟ್ಟಿದ್ದ ಶೃತಿ ಹಾಸನ್ ಫೇರಿಟೀನ್ ನಿಂದ ಇಳಿದು ಬಂದ ರಾಜಕುಮಾರಿಯಂತೆ ಕಂಗೊಳಿಸಿದರು.
ಮತ್ತೊಂದೆಡೆ ನಟಿ ತ್ರಿಶಾ ಕೃಷ್ಣನ್ ತಮ್ಮ ಕೆಂಪು ಔಟ್‌ಫಿಟ್ ಉಡುಗೆ ಧರಿಸಿ ಕ್ಯಾಮರಾಗಳಿಗೆ ವಿವಿಧ ಭಂಗಿಗಳಿಗೆ ಫೋಸ್ ಕೊಟ್ಟರು. ಅಷ್ಟೇ ಅಲ್ಲ, ಅರವಿಂದ ಸ್ವಾಮಿ ಕೆ.ಭಾಗ್ಯರಾಜ್, ಮಂಜು ವಾರಿಯರ್, ಸತ್ಯರಾಜ್, ಸಿದ್ ಶ್ರೀರಾಮ್, ಮನೋಬಾಲಾ, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ತಾರಾ ನಕ್ಷತ್ರಗಳು ಮಿಂಚಿದ್ದು ಭವ್ಯ ಸಮಾರಂಭಕ್ಕೆ ಸಾಕ್ಷಿಯಾಯಿತು.
ಇಡೀ ದೇಶದಲ್ಲಿ ಭಾರೀ ಸದ್ದು ಮಾಡಿದ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದ ಪ್ರಶಾಂತ್ ನೀಲ್ ನಿರ್ದೇಶನದ “ಕೆಜಿಎಫ್” ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿತು. ಇದೇ ಚಿತ್ರದಲ್ಲಿ ಗಡ್ಡದಾರಿಯಾಗಿ ರಾಕಿಭಾಯ್ ಪಾತ್ರದಲ್ಲಿ ಅಭಿನಯಿಸಿದ ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಗಳಿಸಿದರೆ, ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿದ ಟಗರು ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಮಾನ್ವಿತಾ ಹರೀಶ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಹಾಗೆಯೇ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಒಟ್ಟು ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳನ್ನು ನಾತಿ ಚರಾಮಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

filmfare2
ನಿರ್ದೇಶಕ ಮನ್ಸೋರೆ ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿಗೆ ಭಾಜನರಾದರೆ, ಶರಣ್ಯಾಗೆ ಅತ್ಯುತ್ತಮ ಪೋಷಕ ನಟಿ, ಶ್ರುತಿ ಹರಿಹರನ್‌ಗೆ ವಿಮರ್ಶಕ ಪ್ರಶಸ್ತಿ ಈ ಚಿತ್ರಕ್ಕೆ ಹಾಡಿದ ಬಿಂದು ಮಾಲಿನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಪಾತ್ರರಾದರು. “ಅಯೋಗ್ಯ” ಚಿತ್ರದ ಅಭಿನಯಕ್ಕಾಗಿ ನೀನಾಸಂ ಸತೀಶ್ ಅತ್ಯುತ್ತಮ ವಿಮರ್ಶಕ, ಟಗರು ಚಿತ್ರದಲ್ಲಿ ಡಾಲಿಯಾಗಿ ಗುಟುರು ಹಾಕಿದ ಧನಂಜಯ ಅವರಿಗೆ ಅತ್ಯುತ್ತಮ ಪೋಷಕ ನಟ, ನಡುವೆ ಅಂತರವಿರಲಿ, ಚಿತ್ರದ ಶಾಕುಂತಲೆ ಸಿಕ್ಕಳು ಹಾಡಿಗೆ, ಯುವ ಗಾಯಕ ಸಂಚಿತ್ ಹೆಗ್ಡೆಗೆ ಅತ್ಯುತ್ತಮ ಹಿನ್ನೆಲೆ ಗಾಯಕ, ಹಸಿರು ಚಿತ್ರದ ಸಕ್ಕರೆ ಪಾಕದಲ್ಲಿ ಗೀತ ರಚನೆ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ಅತ್ಯುತ್ತಮ ಸಾಹಿತ್ಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಸಂಗೀತ ನೀಡಿದ್ದಕ್ಕಾಗಿ ವಾಸುಕಿ ವೈಭವ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ತನ್ನದಾಗಿಸಿಕೊಂಡರು.
ಫಿಲಂ ಫೇರ್ ಪ್ರಶಸ್ತಿ ಆರಂಭಗೊಂಡಾಗಿನಿಂದಲೂ ದಕ್ಷಿಣ ಭಾರತದ ಚಲನಚಿತ್ರ ಉದ್ಯಮಗಳ ಕಲಾವಿದರು ಒಗ್ಗೂಡಿ ತಮ್ಮ ಕಲೆಯನ್ನು ಆಚರಿಸುವ ಸಂಪ್ರದಾಯವನ್ನು ಹಾಕಿಕೊಟ್ಟಿದೆ ಎನ್ನುತ್ತಾರೆ. ವರ್ಲ್ಡ್ ವೈಡ್ ಮೀಡಿಯಾದ ಸಿಇಓ ದೀಪಕ್ ಲಾಂಬಾ.
ದಕ್ಷಿಣ ಚಲನಚಿತ್ರ ಉದ್ಯಮ ಇಲ್ಲಿಯ ತನಕ ದೇಶ ಕಂಡಿರುವ ಕೆಲವು ಅತ್ಯಂತ ಪ್ರತಿಭಾವಂತ ಕಲಾವಿದರೊಂದಿಗೆ ಐತಿಹಾಸಿಕ ಚಲನಚಿತ್ರಗಳ ಮೂಲವಾಗಿದೆ ಎಂದು ಫಿಲಂ ಫೇರ್‌ನ ಸಂಪಾದಕ ಜಿತೇಶ್ ಪಿಳ್ಳೈ ಹೇಳಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನಗಳು ಮನಸೂರೆಗೊಂಡವು. ಸೆಲೆಬ್ರಿಟಿಗಳಾದ ರಾಕುಲ್ ಪ್ರೀತಿ ಸಿಂಗ್ ಅತಿಲೋಕ ಸುಂದರಿ ಮತ್ತು ಏಕ್ ಬಾರ್ ನ ಸಂಯೋಜನೆಗೆ ನೃತ್ಯ ಮಾಡಿದ್ದು ಅತ್ಯಾಕರ್ಷಕವಾಗಿತ್ತು.
ವೈವಿಧ್ಯಮಯ ನಟ ಸಂದೀಪ್ ಕೃಷ್ಣನ್ ಹಾಗೂ ಪ್ರತಿಭಾವಂತೆ ರೆಗಿನಾ ಕಸ್ಸಾಂಡ್ರಾ ಈ ಸುಂದರ ಸಂಜೆಯಲ್ಲಿ ನಡೆದ ಕಾರ್ಯಕ್ರಮದ ಆತಿಥೇಯರಾಗಿ ತಮ್ಮ ಹಾಸ್ಯ ಪಟಾಕಿಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಒಟ್ಟಾರೆ ಕನ್ನಡ ಚಲನಚಿತ್ರಗಳು ಇತರ ಭಾಷೆಗಳ ಜತೆ ಪೈಪೋಟಿ ನಡೆಸಿ ಈ ಬಾರಿಯ ಫಿಲಂ ಫೇರ್ ನಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದು ವಿಶೇಷವೆನಿಸಿತು.

Leave a Comment