ಫಿಫಾ: ಫೈನಲ್‌ಗೆ ಕ್ರೊವೇಷಿಯಾ

ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿದ ಕ್ರೊವೇಷಿಯಾ ಆಟಗಾರರ ವಿಜಯೋತ್ಸವ

ಮಾಸ್ಕೊ, ಜು, ೧೨- ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿರುವ ಕ್ರೊವೇಷಿಯಾ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಫಿಫಾ ಅಂತಿಮಘಟ್ಟ ತಲುಪಿದ್ದು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ಮತ್ತು ಫ್ರಾನ್ಸ್ ತಂಗಳು ಸೆಣಸಲಿದ್ದು, ವಿಶ್ವಚಾಂಪಿಯನ್ ಪಟ್ಟ ಯಾರ ಮುಡಿಗೆ ಎಂಬುದು ಕುತೂಹಲ ಕೆರಳಿಸಿದೆ.

ತೀವ್ರ ಪೈಪೋಟಿಯಿಂದ ಕೂಡಿದ ಈ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕೀರನ್ ಟ್ರಿಪ್ಪಿರ್ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯ ಆರಂಭವಾದ ಐದೇ ನಿಮಿಷದಲ್ಲಿ ಕ್ರೊವೆಷಿಯಾ ಮಾಡಿದ ಯಡವಟ್ಟನ್ನು ಇಂಗ್ಲೆಂಡ್ ಸದುಪಯೋಗಪಡಿಸಿಕೊಂಡಿತು. ಇಂಗ್ಲೆಂಡಿನ ಸ್ಟಾರ್ ಆಟಗಾರ ಡೆಲೆ ಅಲಿ ಮತ್ತು ಕ್ರೊವೇಷಿಯಾ ತಂಡದ ಮೊಡ್ರಿಕ್ ನಡುವೆ ಚೆಂಡಿಗಾಗಿ ನಡೆಸಿದ ಹೋರಾಟ ಗೊಂದಲಕ್ಕೆ ಕಾಜಣವಾಯಿತು. ಈ ಸಂದರ್ಭ ಮೊಡ್ರಿಕ್ ಮಾಡಿದ ತಪ್ಪಿನಿಂದಾಗಿ ದೊರೆತ ಅವಕಾಶ ಸದುಪಯೋಗಪಡಿಸಿಕೊಂಡ ಟ್ರಿಪ್ಪರ್ ಕಾರ್ನರ್‌ನತ್ತ ಬಲವಾಗಿ ಬೀಸಿದ ಚೆಂಡನ್ನು ತಡೆಯಲು ಕ್ರೊವೇಷಿಯಾ ಗೋಲ್ ಕೀಪರ್ ವಿಫಲರಾಗಿದ್ದರಿಂದ ಇಂಗ್ಲೆಂಡ್ ಮುನ್ನಡೆ ಸಾಧಿಸಲು ಸಹಕಾರಿಯಾಯಿತು. ಈ ಮೂಲಕ ಟ್ರಿಪ್ಪರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾದರು.

ಬಳಿಕ ಉಭಯ ತಂಡಗಳು ಗೋಲು ಬಾರಿಸಲು ಸಾಕಷ್ಟು ಕಸರತ್ತು ನಡೆಸಿದವು. ಪಂದ್ಯದ ೬೮ನೆ ನಿಮಿಷದಲ್ಲಿ ಕ್ರೊವೇಷಿಯಾದ ಇವಾನ್ ಪೆರಿಸಿಕ್ ಭರ್ಜರಿ ಗೋಲು ಬಾರಿಸಿದ್ದರಿಂದ ಪಂದ್ಯದಲ್ಲಿ ಸಮಬಲ ಸಾಧಿಸಲು ಸಹಕಾರಿಯಾಯಿತು.

ನಂತರ ಪಂದ್ಯದ ಅವಧಿ ಅಂತ್ಯಗೊಂಡ ಬಳಿಕ ಇತ್ತಂಡಗಳು ೧-೧ ಸಮಬಲ ಸಾಧಿಸಿದ್ದರಿಂದ ಹೆಚ್ವುವರಿ ಸಮಯ ನೀಡಲಾಯಿತು. ಕ್ರೊವೇಷಿಯಾದ ಮಾರಿಯೊ ಮ್ಯಾಂಡ್ಕು ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಪಂದ್ಯದ ಅವಧಿ ಅಂತ್ಯಗೊಂಡ ವೇಳೆಗೆ ಕ್ರೊವೇಷಿಯಾ ೨-೧ ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಲಗ್ಗೆ ಹಾಕಿದೆ. ಈ ಮೂಲಕ ಫೈನಲ್ ತಲುಪುವ ಕನಸು ಕಾಣುತ್ತಿದ್ದ ಇಂಗ್ಲೆಂಡ್ ತಂಡದ ಕನಸು ಭಗ್ನಗೊಂಡಿತು. ಕ್ರೊವೇಷಿಯಾ ಮತ್ತು ಫ್ರಾನ್ಸ್ ತಂಡಗಳ ನಡುವೆ ನಡೆಯಲಿರುವ ಫೈನಲ್ ಕಾದಾಟದತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ.

Leave a Comment