ಫಿಫಾ ಕಿರಿಯರ ವಿಶ್ವಕಪ್ : ದೇಶದ ಫುಟ್ಬಾಲ್ ಕ್ರೀಡೆ ಅಭಿವೃದ್ಧಿ ಪರ್ವದ ಆರಂಭ

ಕ್ರಿಕೆಟ್‌ಗೆ ಹೆಚ್ಚು ಪ್ರಾತಿನಿಧ್ಯತೆ ಇರುವ ಭಾರತದಲ್ಲಿ ೧೭ ವಯೋಮಿತಿ ಫಿಪಾ ವಿಶ್ವಕಪ್ ಆಯೋಜಿಸಿರುವುದು ಮಹತ್ವದ ಬೆಳವಣಿಗೆ.ಅದರಲ್ಲೂ ಭಾರತ ತಂಡಕ್ಕೆ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದಂತೂ ಅದೃಷ್ಟವೇ ಸರಿ.ಇದರಿಂದಾಗಿ ದೇಶದಲ್ಲಿ ಫುಟ್‌ಬಾಲ್ ಬೆಳವಣಿಗೆಯ ನಿರೀಕ್ಷೆ ಹಾಗೂ ಹೊಸ ಪ್ರತಿಭೆಗಳು ಹುಟ್ಟು ಹಾಕಲು ಈ ಟೂರ್ನಿ ಮಹತ್ವದ ವೇದಿಕೆಯಾಗಲಿದೆ.
ಭಾರತದಲ್ಲಿ ಕ್ರೀಡೆ ಎಂದಾಕ್ಷಣ ಮೊದಲು ನೆನಪಾಗುವುದು ಕೇವಲ ಕ್ರಿಕೆಟ್ ಮಾತ್ರ.ಅಷ್ಟರ ಮಟ್ಟಿಗೆ ಭಾರತದಲ್ಲಿ ಕ್ರಿಕೆಟ್ ತನ್ನ ಸಾರ್ವಭೌಮತ್ವ ಸಾಧಿಸಿದೆ.ಐಪಿಎಲ್ ನಿಂದಾಗಿ ಇನ್ನಷ್ಟು ಬಲಪ್ರದವಾಗಿರುವ ಬಿಸಿಸಿಐ ಪ್ರಪಂಚದಲ್ಲೇ ಶ್ರೀಮಂತ ಸಂಸ್ಥೆಯಾಗಿ ಬೆಳೆದು ನಿಂತಿದೆ.ಇದರ ಬೆನ್ನಲ್ಲೇ ಮಣ್ಣಿನ ಮಕ್ಕಳ ಆಟ ,ಗ್ರಾಮೀಣ ಕ್ರೀಡೆ ಎಂದೆ ಕರೆಯುವ ಕಬ್ಬಡ್ಡಿ ಕ್ರೀಡೆ ಈಗ ಪ್ರೊ ಕಬಡ್ಡಿ ಲೀಗ್‌ನಿಂದಾಗಿ ಹೆಚ್ಚಿನ ಖ್ಯಾತಿ ಪಡೆಯುತ್ತಿದೆ.ಇದರಿಂದಾಗಿ ಹೆಚ್ಚು ಮಕ್ಕಳು ಕಬಡ್ಡಿಯತ್ತಾ ಆಕರ್ಷಿತರಾಗಲು ಈ ವೇದಿಕೆ ಉತ್ತಮ ಬೆಳೆವಣಿಗೆ ಎಂದು ಬಾವಿಸಬಹುದು.
ಫಿಫಾ ಸಂಸ್ಥೆ ೧೭ ವಯೋಮಿತಿಯ ವಿಶ್ವಕಪ್ ಆಯೋಜನೆಗೆ ಭಾರತಕ್ಕೆ ಅವಕಾಶ ನೀಡಿರುವುದರಿಂದ ದೇಶದಲ್ಲೆಡೆ ಫುಟ್‌ಬಾಲ್ ಕಾವು ಹೆಚ್ಚಾಗುವ ಸಂಭವವಿದೆ. ಬರೀ ಕ್ರಿಕೆಟ್‌ನ್ನೆ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಮಕ್ಕಳು- ಯುವಕರು ಕಿರಿಯರ ಫಿಫಾ ವಿಶ್ವಕಪ್‌ನಿಂದಾಗಿ ಫುಟ್‌ಬಾಲ್ ಕ್ರೀಡೆಯತ್ತ ಆಕರ್ಷಿತರಾಗಬಹುದು.ಪ್ರಪಂಚದಲ್ಲೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಫುಟ್‌ಬಾಲ್ ಕ್ರೀಡೆಗೆ ಭಾರತದಲ್ಲಿ ಹೆಚ್ಚಿನ ಪ್ರೋತ್ಸಾಹ ಇಲ್ಲದೆ ಇರುವುದು ನೋವಿನ ಸಂಗತಿ.
ಆದರೆ ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್ ನಿಂದಾಗಿ ಆ ನೋವು ಮರೆಯಬಹುದೆಂಬ ಸಣ್ಣ ನಂಬಿಕೆ ಫುಟ್‌ಬಾಲ್ ಪ್ರೇಮಿಗಳಲ್ಲಿ ಮೂಡಿದೆ.ಭಾರತದ ಹಿರಿಯರ ತಂಡ ಇತಿಹಾಸದಲ್ಲೇ ಫಿಫಾ ವಿಶ್ವಕಪ್ ಆಡುವ ಅರ್ಹತೆ ಪಡೆದಿಲ್ಲ. ಆದರೆ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆಯೋಜಿಸುತ್ತಿರುವುದರಿಂದಾಗಿ ಕಿರಿಯರಿಗೆ ಆಡುವ ಅವಕಾಶ ಸಿಕ್ಕಿರುವುದು ಸೌಭಾಗ್ಯ.ಇದನ್ನು ಕಿರಿಯರು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳತ್ತಾರೆಂದು ಎಂದು ಕಾದು ನೋಡಬೇಕಾಗಿದೆ.
ಎಎಫ್‌ಸಿ ಕಾನ್ಫೆಡೆರೇಷನ್ ಮೂಲಕ ಫಿಫಾ ವಿಶ್ವಕಪ್ ಗೆ ಕಾಲಿಡುತ್ತಿರುವ ಅಮರ್‌ಜೀತ್ ಸಿಂಗ್ ನಾಯಕತ್ವದ ಭಾರತ ಫುಟ್‌ಬಾಲ್ ತಂಡ ಉತ್ತಮ ಪ್ರದರ್ಶನ ನೀಡಲು ಸಕಲ ರೀತಿಯ ತಾಲೀಮು ನಡೆಸುತ್ತಿದೆ.ತರಬೇತುದಾರ ಲೂಯಿಸ್ ನಾರ್ಟನ್ ಡೊ ಮಾಟೊಸ್ ಅವರ ಮಾರ್ಗದರ್ಶನದಲ್ಲಿ ತಂಡ ಸಜ್ಜಾಗುತ್ತಿದೆ.ಭಾರತದ ಮುಂಚೂಣಿ ಆಟಗಾರ ಅನಿಕಾತ್ ಜಾದವ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಇಂದು ರಾತ್ರಿ ೮ ಗಂಟೆಗೆ ನವದೆಹಲಿಯ ಜವಹಾರ್‌ಲಾಲ್ ನೆಹರು ಕ್ರಿಡಾಂಗಣದಲ್ಲಿ ಭಾರತ ತಂಡ ಟೂರ್ನಿಯ ಪ್ರಥಮ ಪಂದ್ಯವನ್ನು ಬಲಿಷ್ಟ ತಂಡ ಅಮೇರಿಕಾ ವಿರುದ್ಧ ಸೆಣಸಲಿದೆ.ಎರಡನೇ ಪಂದ್ಯ ಇದೇ ಮೈದಾನದಲ್ಲಿ ಕೊಲಂಬಿಯ ವಿರುದ್ದ ಆಡಲಿದೆ.ಹಾಗೂ ಲೀಗ್‌ನ ಕೊನೆಯ ಪಂದ್ಯ ಘಾನ ವಿರುದ್ದ ಸೆಣಸಲಿದೆ.ಲೀಗ್ ನ ಮೂರು ಪಂದ್ಯಗಳಲ್ಲಿ ಎರಡು ಅಥವಾ ಒಂದು ಪಂದ್ಯ ಜಯ ಕಂಡರೆ ಮುಂದಿನ ಹಂತಕ್ಕೆ ತಲುಪಬಹುದು.
ಭಾರತ ಇದುವರೆಗೂ ೭ ಬಾರಿ ಎಎಫ್‌ಸಿ ೧೬ ವರ್ಷದೊಳಗಿನವರ ಚಾಂಪಿಯನ್‌ಷಿಪ್ ನಲ್ಲಿ ಭಾಗವಹಿಸಿದೆ.ಒಮ್ಮೆ ಮಾತ್ರ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದಿದೆ.ಇದಷ್ಟೆ ಕಿರಿಯರ ಸಾಧನೆಯಾಗಿದ್ದು,ಫಿಫಾ ಗೆಲ್ಲುತ್ತಾರೆಂಬ ವಿಶ್ವಾಸ ಇಲ್ಲದಿದ್ದರು ಉತ್ತಮ ಆಟದ ನಿರೀಕ್ಷೆ ಇದೆ.ನಿರೀಕ್ಷೆಗೂ ಮೀರಿ ಉತ್ತಮ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸಿಗಬಹುದು.
ಒಟ್ಟಾರೆ ಕಿರಿಯರ ಫಿಫಾ ವಿಶ್ವಕಪ್ ಅಲೆ ದೇಶದಲ್ಲಿ ಹೆಚ್ಚು ಆಭಿಮಾನಿಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.ಬೆಳೆಯುತ್ತಿರುವ ಮಕ್ಕಳಲ್ಲಿ ಪುಟ್ಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬಹುದು.ಜತೆಗೆ ಪುಟ್ಬಾಲ್ ಕ್ರೀಡೆಗೆ ವಿವಿಧ ಕಂಪೆನಿಗಳು ಆಯೋಜಕರು ಕೈ ಜೋಡಿಸಿ ಹೆಚ್ಚು ಹೆಚ್ಚು ಟೂರ್ನಿಗಳನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ಮುಂದೆ ಬರಬಹುದು.
ಇದರಿಂದ ಫುಟ್ಬಾಲ್ ಕ್ರೀಡೆ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ಈ ಬೆಳವಣಿಗೆಯಿಂದಾಗಿ ಫುಟ್ಬಾಲ್ ಕಲಿಯುವ ಆಸಕ್ತರು ಹೆಚ್ಚಾದಾಗ ಕಾಲಕ್ರಮೇಣ ನಗರಗಳಲ್ಲಿ ಆಕಾಡೆಮಿ ,ಕ್ಲಬ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿವೆ.ಹಿಗಾಗಿ ಫುಟ್ಬಾಲ್‌ನಲ್ಲಿ ಹೆಚ್ಚು ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ.ಆದ್ದರಿಂದ ಇವತ್ತಿನಿಂದ ಆರಂಭವಾಗುತ್ತಿರುವ ಕಿರಿಯರ ಫಿಫಾ ವಿಶ್ವಕಪ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.ಒಟ್ಟಿನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ಪತಾಕೆ ಹಾರಿಸಲಿ ಎಂಬುದು ನಮ್ಮ ಆಶಯ.

Leave a Comment