ಫಾಸ್ಟ್ ಪ್ಯಾಸೆಂಜರ್ ರೈಲಿನ 5ನೇ ವರ್ಷದ ಸಂಭ್ರಮಾಚರಣೆ

ತುಮಕೂರು, ಆ. ೩- ಇಲ್ಲಿನ ರೈಲ್ವೆ ನಿಲ್ದಾಣದಲ್ಲಿಂದು ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿನ 5ನೇ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಪ್ರತಿನಿತ್ಯ ಬೆಳಿಗ್ಗೆ 8.15 ಗಂಟೆಗೆ ತುಮಕೂರು ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ರೈಲು ಸಂಚಾರ ಆರಂಭವಾಗಿ ಇಂದಿಗೆ 5 ವರ್ಷ ಸಂದಿರುವ ಹಿನ್ನೆಲೆಯಲ್ಲಿ ವೇದಿಕೆ ವತಿಯಿಂದ ರೈಲನ್ನು ಬಾಳೆಕಂದು, ಮಾವಿನ ತೋರಣ, ಬಲೂನ್ ಹಾಗೂ ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ರೈಲ್ವೆ ಲೋಕೋ ಫೈಲೆಟ್ (ಚಾಲಕರು)ಗಳಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಆಚರಿಸಿ, ನೆರೆದಿದ್ದ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಉದ್ಯೋಗ, ವ್ಯಾಪಾರ ಇನ್ನಿತರೆ ಉದ್ದೇಶಗಳಿಗಾಗಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ 8.15ಕ್ಕೆ ಹೊರಡುವ ಈ ರೈಲು ಸಂಚಾರದಿಂದ ಪ್ರಯಾಣಿಕರಿಗೆ ತುಂಬಾ ಉಪಯೋಗವಾಗಿದೆ ಎಂದರು.

ದಿನ ಕಳೆದಂತೆ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಒಂದು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರದ ಅಗತ್ಯವಿದೆ. ಹಾಗಾಗಿ ರಾತ್ರಿ ವೇಳೆ ತುಮಕೂರು ರೈಲ್ವೆ ನಿಲ್ದಾಣದಲ್ಲೇ ತಂಗಿ ಬೆಳಿಗ್ಗೆ ಬೆಂಗಳೂರಿಗೆ ಹೊರಡುವ ರೈಲಿನ ಸೌಲಭ್ಯ ಕಲ್ಪಿಸಬೇಕು ಎಂದು ಅವರು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.

ದಿನನಿತ್ಯದ ಜಂಜಾಟದ ನಡುವೆ ಫಾಸ್ಟ್ ಪ್ಯಾಸೆಂಜರ್ ರೈಲಿನ ಸಂಭ್ರಮಾಚರಣೆ ಮಾಡುತ್ತಿರುವುದು ಪ್ರಯಾಣಿಕರಲ್ಲಿ ಉತ್ಸಾಹ, ಸಂತೋಷ ಉಂಟು ಮಾಡಿದೆ ಎಂದರು.

ಆರೋಗ್ಯ ಶಿಬಿರ
ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ಭಾನುವಾರ ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವೇದಿಕೆಯ ನಿರ್ದೇಶಕ ನಾಗರಾಜು ಮಾತನಾಡಿ, ಈ ಹಿಂದೆ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ನಮ್ಮ ಮನವಿಗೆ ಸ್ಪಂದಿಸಿ ಈ ಫಾಸ್ಟ್ ಪ್ಯಾಸೆಂಜರ್ ರೈಲು ಸೇವೆಯನ್ನು ಒದಗಿಸಿಕೊಟ್ಟಿದ್ದರು. ಅದರ ನೆನಪಿನ ಅಂಗವಾಗಿ ವಾರ್ಷಿಕ ಸಂಭ್ರಮಾಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಇಂದು 5ನೇ ವರ್ಷದ ಸಂಭ್ರಮಾಚರಣೆ ಆಚರಿಸಿರುವುದು ಪ್ರಯಾಣಿಕರಲ್ಲಿ ಹೊಸ ಚೈತನ್ಯ, ಹರ್ಷ, ಸಂತೋಷ ಉಂಟು ಮಾಡಿದೆ ಎಂದು ಅವರು ಹೇಳಿದರು.

ಈ ಸಂಭ್ರಮಾಚರಣೆಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ರಘೋತ್ತಮರಾವ್, ಬಾಲಾಜಿ, ಪರಮೇಶ್, ರಾಜಶೇಖರ್, ರಘು, ಭಾಗ್ಯಲಕ್ಷ್ಮಿ, ರೈಲ್ವೆ ಸ್ಟೇಷನ್ ಮಾಸ್ಟರ್ ಹಾಗೂ ರೈಲ್ವೆ ಪೊಲೀಸ್ ಅಧಿಕಾರಿಗಳು, ಪ್ರಯಾಣಿಕರು ಭಾಗವಹಿಸಿದ್ದರು.

Leave a Comment