ಫಲಿತಾಂಶಕ್ಕೆ ಕ್ಷಣಗಣನೆ ನಾಳೆ ಅಭ್ಯರ್ಥಿಗಳ ಅದೃಷ್ಟ ಬಹಿರಂಗ

ಬೆಂಗಳೂರು, ಮೇ ೧೪- ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಧಿಕಾರ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸುಮಾರು 2500ಕ್ಕೂ ಹೆಚ್ಚು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಬಹಿರಂಗವಾಗಲಿದೆ. ಕಳೆದ 12 ರಂದು ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಫಲಿತಾಂಶ ಏನಾಗುತ್ತದೆ. ಯಾರು ಗೆಲ್ಲುತ್ತಾರೆ ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ಕುತೂಹಲಗಳಿಗೆ ನಾಳೆ ಉತ್ತರ ಸಿಗಲಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ, ಅಥವಾ ಏಕ ಪಕ್ಷಕ್ಕೆ ಬಹುಮತ ಸಿಗಲಿದೇ ಯಾರು ಮುಂದಿನ ಮುಖ್ಯಮಂತ್ರಿ ಎಂಬೆಲ್ಲಾ ಚರ್ಚೆಗಳಿಗೆ ನಾಳಿನ ಫಲಿತಾಂಶ ಉತ್ತರ ನೀಡಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿದ್ದು, ಇಲ್ಲಿನ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮುಂಬರುವ ಲೋಕಸಭಾ ಚುನಾವಣಾ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಚುನಾವಣೆ ಸಿದ್ಧರಾಮಯ್ಯ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇವರುಗಳಿಗೆ ಎಷ್ಟು ಮುಖ್ಯವೋ ಪ್ರಧಾನಿ ನರೇಂದ್ರಮೋದಿ ಹಾಗೂ ರಾಹುಲ್‌ಗಾಂಧಿ ಅವರಿಗೂ ಅಷ್ಟೇ ಮುಖ್ಯ ಈ ಚುನಾವಣೆಯಾಗಿದೆ. ಬರುವ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ದಿಕ್ಸೂಚಿ ಎನಿಸಿರುವುದರಿಂದ ಇಡೀ ದೇಶ ಚುನಾವಣೆಯ ಫಲಿತಾಂಶದತ್ತ ಕಣ್ಣಿಟ್ಟಿದ್ದು, ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ದೇಶಾದ್ಯಂತ ಇದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆ ಢವಢವ ಎನ್ನತೊಡಗಿದ್ದು, ಚುನಾವಣೆಯಲ್ಲಿ ಗೆಲುವಾಗುತ್ತದೋ, ಸೋಲಾಗುತ್ತದೋ ಎಂಬ ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದ್ದು, ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಮತದಾನದ ನಂತರ ಕೆಲ ಅಭ್ಯರ್ಥಿಗಳು ವಿಶ್ರಾಂತಿಗೆ ತೆರಳಿದ್ದರೇ ಬಹುತೇಕ ಅಭ್ಯರ್ಥಿಗಳು ಗೆಲುವಿಗಾಗಿ ತಾವು ನಂಬಿದ ದೇವರೆ ಮೊರೆ ಹೋಗಿ ಪೂಜೆ ಪುನಸ್ಕಾರ ನಡೆಸಿದ್ದಾರೆ. ಗೆಲುವಿಗಾಗಿ ಕಂಡ ಕಂಡ ದೇವರಿಗೆ ಕೈ ಮುಗಿದು ಪ್ರಾರ್ಥಿಸುತ್ತಿದ್ದಾರೆ.  ನಾಳೆ ಮಧ್ಯಾಹ್ನದೊಳಗೆ ಫಲಿತಾಂಶ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.  ಜಿಲ್ಲೆಯಲ್ಲೂ ಮತ ಎಣಿಕೆ ಮತ ಎಣಿಕೆಗಾಗಿ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತ ಎಣಿಕೆಗೆ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕೇಂದ್ರಗಳ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕ್ಷೇತ್ರಗಳ ಮತ ಎಣಿಕೆ ಪ್ರತ್ಯೇಕವಾಗಿ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶಗಳು ಪ್ರಕಟವಾಗಲಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬೆಂಗಳೂರಿನ ಜಯನಗರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿದೆ.  ಭಾರಿ ಬೆಟ್ಟಿಂಗ್ ಚುನಾವಣಾ ಫಲಿತಾಂಶಗಳು ನಾಳೆ ಪ್ರಕಟವಾಗುವ ಮೊದಲೆ ರಾಜ್ಯದಲ್ಲಿ ಚುನಾವಣಾ ಬೆಟ್ಟಿಂಗ್ ಜೋರಾಗಿದ್ದು, ಯಾರು ಗೆಲ್ಲುತ್ತಾರೆ, ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಹಣ, ಆಸ್ತಿ, ಭೂಮಿಯನ್ನು ಈ ಬೆಟ್ಟಿಂಗ್‌ನಲ್ಲಿ ಪಣಕ್ಕಿಡಲಾಗಿದೆ.

Leave a Comment