ಪ.ಜಾತಿ/ಪ.ಪಂ ಜನರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಸದುಪಯೋಗಪಡೆದುಕೊಳ್ಳಲು ಎಡಿಜಿಪಿ ಕರೆ

ದಾವಣಗೆರೆ ನ.20;ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಲಭಿಸುವಲ್ಲಿ ತಾರತಮ್ಯ, ಅನ್ಯಾಯವಾದಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬಹುದೆಂದು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಕೆ.ರಾಮಚಂದ್ರರಾವ್ ತಿಳಿಸಿದರು.
ನ.20 ರಂದು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ಕಟ್ಟಡವನ್ನು ಸ್ಥಳಾಂತರಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಸ್‍ಸಿ/ಎಸ್‍ಟಿ ಜನಾಂಗಕ್ಕೆ ಸೇರಿದ ಜನತೆಗೆ ಸಾಂವಿಧಾನಿಕವಾಗಿ ಸಿಗಬೇಕಾದ ಸವಲತ್ತುಗಳು, ಸರ್ಕಾರದ ವಿವಿಧ ಸೌಲಭ್ಯಗಳು ದೊರಕುವಲ್ಲಿ ಅನ್ಯಾಯವಾದಲ್ಲಿ, ತಾರತಮ್ಯಕ್ಕೊಳಗಾದಲ್ಲಿ, ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಅನುಷ್ಟಾನದಲ್ಲಿ ತೊಡಕು, ವಿಳಂಬವಾಗುತ್ತಿದ್ದಲ್ಲಿ ಹಾಗೂ ದೌರ್ಜನ್ಯ ಪ್ರಕರಣಗಳಿದ್ದಲ್ಲಿ ನಾಗರೀಕ ಹಕ್ಕುಗಳ ಜಾರಿ ಕಚೇರಿಗೆ ದೂರು ಸಲ್ಲಿಸಬೇಕು. ದೂರು ಪಡೆದ ನಂತರ ನಾವು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ದಿಸೆಯಲ್ಲಿ ನಿರ್ದೇಶನಾಲಯ ಸಾಕಷ್ಟು ಕೆಲಸ ಮಾಡಲಾಗುತ್ತಿದೆ.
1974 ರಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಈ ಘಟಕ ಆರಂಭವಾಗಿದ್ದು ರಾಜ್ಯದ 7 ಕಡೆಗಳಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ಈ ಜಿಲ್ಲಾ ಘಟಕದಡಿ ದಾವಣಗೆರೆ, ಶಿವಮೊಗ್ಗ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕಾರ್ಯ ನಿರ್ವಹಿಸುತ್ತಿವೆ. ಪೊಲೀಸ್ ಅಧೀಕ್ಷಕರು ಸೇರಿದಂತೆ ಒಟ್ಟು 24 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೊದಲು ಎಂಸಿಸಿ ಎ ಬ್ಲಾಕ್‍ನಲ್ಲಿ ಈ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ಕೆಲಸ ಮಾಡುತ್ತಿತ್ತು. ಆದರೆ ಆ ಸ್ಥಳದಲ್ಲಿ ಸಾರ್ವಜನಿಕರಿಗೆ ಈ ಕಚೇರಿ ಅಷ್ಟಾಗಿ ಸಂಪರ್ಕಕ್ಕೆ ಬಾರದ ಕಾರಣ, ಶಿವಕುಮಾರಸ್ವಾಮಿ ಬಡಾವಣೆಯ ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಚೇರಿ ಮುಖ್ಯರಸ್ತೆಗೆ ಹತ್ತಿರವಾಗಿದ್ದು ಜನರು ಈ ಕಚೇರಿಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸುಳ್ಳು ಜಾತಿ ಪ್ರಮಾಣ ಪತ್ರ ಹಾವಳಿ : ಸರ್ಕಾರಿ ಕೆಲಸ ಮತ್ತು ಇತರೆಗಳ ಉಪಯೋಗಗಳನ್ನು ಪಡೆಯಲು ಇತ್ತೀಚೆಗೆ ಎಸ್‍ಸಿ/ಎಸ್‍ಟಿ ನಕಲಿ ದೃಢೀಕರಣ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಎಸ್‍ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ರಾಜ್ಯದ್ಯಾಂತ ಇದುವರೆಗೆ ಒಟ್ಟು 542 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಅವರು ಸಮಿತಿಯಲ್ಲಿರುವ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವರದಿಯನ್ನು ಪರಿಶೀಲನೆ ನಡೆಸಿ, ವರದಿ ಸರಿಯಾಗಿದ್ದರೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಅಧಿಕಾರಿ/ಸಿಬ್ಬಂದಿಯನ್ನು ವಜಾಗೊಳಿಸುತ್ತಾರೆ. ತಪ್ಪಿತಸ್ಥ ಸಿಬ್ಬಂದಿ/ಅಧಿಕಾರಿ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಲಾಗುವುದು. ಹಾಗೂ ತಹಶೀಲ್ದಾರ್, ಆರ್‍ಐ ಇವರು ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ದವೂ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು.
ಆದರೆ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ಪತ್ತೆ ಒಂದು ಸಂಕೀರ್ಣ ಕೆಲಸವಾಗಿದ್ದು, ಆಪಾದಿತರ ಸಂಪೂರ್ಣ ಇತಿಹಾಸ ಜಾಲಾಡಬೇಕಾಗುತ್ತದೆ. ಹಾಗೂ ಆಪಾದಿತರು ಮೇಲು ಹಂತದ ನ್ಯಾಯಾಯದಲ್ಲಿಯೂ ನಮ್ಮ ತೀರ್ಪಿನ್ನು ಪ್ರಶ್ನಿಸುತ್ತಾರೆ. ಸುಪ್ರೀಂ ಕೋರ್ಟ್‍ವರೆಗೆ ಹೋಗಿರುತ್ತಾರೆ.
ಇದುವರೆಗೆ 100 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣ ದೃಢಪಟ್ಟಿವೆ. 83 ಸರ್ಕಾರಿ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆನ್ನಲಾದ 144 ತಹಶೀಲ್ದಾರರ ವಿರುದ್ದ ವರದಿಗಳನ್ನು ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಘಟಕದಲ್ಲಿ ಇಲ್ಲಿಯವರೆಗೆ 125 ಸುಳ್ಳು ಜಾತಿ ಪ್ರಮಾಣ ಪಡೆದುಕೊಂಡ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.  ಜಾತಿ ವಿಚಾರಣಾ ಅರ್ಜಿಗಳಿಗೆ ಸಂಬಂಧಿಸಿದಂತೆ ಕಳೆದ 1992 ರಿಂದ 2019 ರವರೆಗೆ 332 ಅರ್ಜಿಗಳನ್ನು ಸ್ವೀಕರಿಸಿದ್ದು, 325 ಅರ್ಜಿ ವಿಲೇವಾರಿ ಮಾಡಲಾಗಿದೆ. 07 ಅರ್ಜಿಗಳು ಬಾಕಿ ಇವೆ. ದೌರ್ಜನ್ಯ ಪ್ರಕರಣದಡಿ  ಲ್ಲಿಯವರೆಗೆ ಒಟ್ಟು 26 ಪ್ರಕರಣ ದಾಖಲಿಸಲಾಗಿದೆ ಎಂದರು.
ಜಾಗೃತಿ ಕಾರ್ಯಕ್ರಮ : ತಮ್ಮ ಸಮಸ್ಯೆಗಳ ಕುರಿತು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕಚೇರಿಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಹೆಚ್ಚಿನ ಎಸ್‍ಸಿ/ಎಸ್‍ಟಿಗೆ ಸೇರಿದ ಜನರಿಗೆ ಅರಿವಿಲ್ಲ. ಆದ್ದರಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಗಳು, ಹಾಸ್ಟೆಲ್ ಭೇಟಿಯಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಐಜಿ ಅಮ್ರಿತ್ ಪಾಲ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಎಎಸ್‍ಪಿ ರಾಜೀವ್, ನಗರ ಉಪವಿಭಾಗದ ಡಿವೈಎಸ್‍ಪಿ ನಾಗೇಶ್ ಐತಾಳ್, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಸಬ್‍ಇನ್ಸ್‍ಪೆಕ್ಟರ್‍ಗಳು, ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Leave a Comment