ಪ್ಲಾಸ್ಟಿಕ್ ಮುಕ್ತ ಭಾರತದ ಕೊಡುಗೆ ನೀಡೋಣ

ನವದೆಹಲಿ, ಆ 25    ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನೋತ್ಸವ ಅಂಗವಾಗಿ ದೇಶವನ್ನು ತೆರೆದ ಶೌಚಾಲಯ ಮುಕ್ತ ಹಾಗೂ ‘ಏಕ ಬಳಕೆಯ ಪ್ಲಾಸ್ಟಿಕ್ ‘ ಮುಕ್ತ ಭಾರತವನ್ನಾಗಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಆಲ್ ಇಂಡಿಯ ರೇಡಿಯೋದಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರಂದು ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್ 2ರಂದು ಜನರು ಪ್ಲಾಸ್ಟಿಕ್ ಬಳಕೆ ನಿಷೇಧದ ಹೊಸ ಕ್ರಾಂತಿಗೆ ಮುನ್ನುಡಿ ಹಾಡಬೇಕು ಎಂದು ಕರೆ ನೀಡಿದರು.

ಈ ವರ್ಷ ಸೆ. 11ರಿಂದಲೇ ದೇಶಾದ್ಯಂತ ‘ಸ್ವಚ್ಛತೆಯೇ ಸೇವೆ ‘ ಅಭಿಯಾನವನ್ನು ಆರಂಭಿಸಲಾಗುವುದು. ಈ ಅವಧಿಯಲ್ಲಿ ಪ್ರತಿಯೊಬ್ಬರೂ ಮನೆಯಿಂದ ಹೊರಬಂದು ‘ಸಾಮಧಾಮ’ ವಿಧಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಾತ್ಮಾ ಗಾಂಧಿ ಅವರಿಗೆ ‘ಕಾರ್ಯಾಂಜಲಿ’ ನೀಡೋಣ. ಪ್ರತಿಯೊಬ್ಬರು ತಮ್ಮ ಮನೆ, ನೆರೆಯ ಬೀದಿ, ವೃತ್ತಗಳು, ಚರಂಡಿ, ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಈ ಬಾರಿ ಪ್ಲಾಸ್ಟಿಕ್ ನಿಷೇಧಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ತಮ್ಮ ಆಗಸ್ಟ್ 15ರ ಭಾಷಣವನ್ನು ಸ್ಮರಿಸಿದ ಮೋದಿ, ‘ಈ ಹಿಂದೆ ಬಯಲು ಶೌಚ ಮುಕ್ತಗೊಳಿಸಲು 125 ಕೋಟಿ ಜನರು ಅತ್ಯಂತ ಉತ್ಸಾಹದಿಂದ ಟೊಂಕಕಟ್ಟಿ ನಿಂತಿದ್ದರು. ಅದೇ ಮಾದರಿಯಲ್ಲಿ ‘ಏಕ ಬಳಕೆಯ ಪ್ಲಾಸ್ಟಿಕ್ ‘ ಮುಕ್ತಗೊಳಿಸಲು ಮುಂದಾಗಬೇಕು. ಇದರಲ್ಲಿ ಸಮಾಜದ ಎಲ್ಲಾ ಸ್ತರದ ಉತ್ಸಾಹಿ ನಾಗರಿಕರು ಪಾಲ್ಗೊಳ್ಳಬೇಕು ‘ ಎಂದು ಕರೆ ನೀಡಿದರು. .”

ಮಹಾತ್ಮಾ ಗಾಂಧಿ ಅವರ ಜನ್ಮದಿನವನ್ನು ವಿಶೇಷ  ‘ಶ್ರಮದಾನ’ ದಿನವಾಗಿ ಆಚರಿಸಬೇಕು, ಇದಕ್ಕಾಗಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಎಲ್ಲಾ ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತ, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ನಾಗರಿಕರು ಕೂಡ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಹಾಗೂ ಸಂಗ್ರಹಣೆಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಮೋದಿ ಕರೆ ನೀಡಿದರು.

ಕಾರ್ಪೊರೇಟ್ ವಲಯ ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯ ವಿಧಾನಗಳನ್ನು ಕಂಡುಹಿಡಿಯಬೇಕು ಎಂದು ಸಲಹೆ ನೀಡಿದ ಮೋದಿ, ಅದನ್ನು ಇಂಧನವನ್ನಾಗಿ ಪರಿವರ್ತಿಸಬಹುದು. ಈ ಮೂಲಕ ದೀಪಾವಳಿಗೂ ಮುನ್ನ ಪ್ಲಾಸ್ಟಿಕ್ ನ ಸುರಕ್ಷಿತ ವಿಲೇವಾರಿಯತ್ತ ಗಮನ ಹರಿಸಬಹುದು. ಈ ಎಲ್ಲಾ ಕೆಲಸಗಳಿಗೆ ನಾವು ಪ್ರೇರಣೆಗಾಗಿ ಅಲ್ಲಿ ಇಲ್ಲಿ ನೋಡುವ ಅಗತ್ಯವಿಲ್ಲ. ಮಹಾತ್ಮಾ ಗಾಂಧಿ ಅವರಿಗಿಂತ ಹೆಚ್ಚಿನ ಪ್ರೇರಣೆಯಿದೆಯೇ ಎಂದು ಪ್ರಶ್ನಿಸಿದ್ದಾರೆ.

Leave a Comment