ಪ್ಲಾಸ್ಟಿಕ್ ಬಳಕೆಗೆ ಕಡಿವಾಣ : ಪರಿಸರ ಹಾನಿ ತಡೆ

ಸಂವಿಧಾನ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ
ಮೈಸೂರು. ಜ.17: ದಿನನಿತ್ಯ ನಾವು ಪ್ಲಾಸ್ಟಿಕ್ ಬಳಸುತ್ತೇವೆ. ಪ್ಲಾಸ್ಟಿಕ್ ಬಳಕೆಯಲ್ಲಿ ಕಡಿವಾಣ ಹಾಕಿದರೆ ಪರಿಸರಕ್ಕಾಗುವ ಹಾನಿಯನ್ನು ತಡೆಯಬಹುದು. ಅಷ್ಟೇ ಅಲ್ಲದೆ ಪರಿಸರವನ್ನು ಸಂರಕ್ಷಿಸಿದರೆ ಸಂವಿಧಾನದಲ್ಲಿ ನೀಡಿದ ಮೂಲಭೂತ ಕರ್ತವ್ಯವವನ್ನು ಪಾಲಿಸಿದಂತಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ತಿಳಿಸಿದರು.
ಅವರು ಇಂದು ಸರಸ್ವತಿಪುರಂನಲ್ಲಿರುವ ಜೆಎಸ್ ಎಸ್ ಪದವಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜೆಎಸ್ ಎಸ್ ಪದವಿ ಹಾಗೂ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ ಸಂವಿಧಾನ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನವೆಂಬರ್ 26 1949ರಲ್ಲಿ ಸಂವಿಧಾನವನ್ನು ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದರು. ಅಲ್ಲಿಂದ ಆ ದಿನವನ್ನು ಲಾ ಡೇ ಎಂದು ಆಚರಣೆ ಮಾಡುತ್ತ ಬಂದರು. 2015ರಲ್ಲಿ ಕೇಂದ್ರ ಸರ್ಕಾರ ಲಾ ಡೇಯನ್ನು ಸಂವಿಧಾನ ದಿನವಾಗಿ ಆಚರಿಸಲು ಸೂಚನೆ ನೀಡಿತು ಎಂದರು.
ಸಂವಿಧಾನದ ಮುಖ್ಯಾಂಶವನ್ನು ಮನನ ಮಾಡಿಕೊಂಡು ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಮಹನೀಯರನ್ನು ಸ್ಮರಿಸುವ ದಿನ. ಪ್ರಪಂಚದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ. ಬೇರೆ ದೇಶಗಳಲ್ಲಿರುವ ಸಂವಿಧಾನ ಅಧ್ಯಯನ ಮಾಡಿ ಆ ಸಂವಿಧಾನದಲ್ಲಿದ್ದ ಹಲವಾರು ಮುಖ್ಯಾಂಶಗಳನ್ನು ನಮ್ಮ ದೇಶಕ್ಕೆ ಹೊಂದಾಣಿಕೆ ಆಗುವ ಅಂಶ ಆಯ್ಕೆ ಮಾಡಿ ಎಲ್ಲ ಅಂಶ ಕ್ರೋಢೀಕರಿಸಿ ಬೃಹತ್ ಸಂವಿಧಾನ ಕೊಟ್ಟಿದ್ದಾರೆ. ಅವರು ಸುಮಾರು ಎರಡು ವರ್ಷದ ಹನ್ನೊಂದು ತಿಂಗಳು ಹದಿನೇಳು ದಿನಗಳ ಕಾಲ ಸತತವಾಗಿ ಕಾನೂನಿನ ಅಂಶ ಕ್ರೋಢೀಕರಿಸಲು ಶ್ರಮಿಸಿದರು. ಅವರು ಪಟ್ಟಂತ ಶ್ರಮದಿಂದ ಇಂದು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಮವಿಧಾನವನ್ನು ಪಡೆದುಕೊಂಡಿದ್ದೇವೆ ಎಂದರು.
ಸರ್ಕಾರದ ಕ್ರಮವನ್ನು ಪ್ರಶ್ನಿಸುವ ಅಧಿಕಾರ ಸಾರ್ವಜನಿಕರಿಗಿದೆ. ಸಂವಿಧಾನದಲ್ಲಿ ನೀಡಲ್ಪಟ್ಟ ಹಕ್ಕುಗಳ ಜೊತೆ ಕರ್ತವ್ಯಗಳ ಅರಿವನ್ನೂ ಹೊಂದಿರಬೇಕು. ಕರ್ತವ್ಯವನ್ನು ಪಾಲಿಸಬೇಕು. ರಾಷ್ಟ್ರ ಲಾಂಛನವನ್ನು, ರಾಷ್ಟ್ರಗೀತೆಯನ್ನು, ರಾಷ್ಟ್ರಧ್ವಜವನ್ನು ಗೌರವಿಸಬೇಕು. ಪರಿಸರವನ್ನು ಕ್ಷಿಸಬೆಕು. ಬೆಳೆಸಬೇಕು. ಇಂದು ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸರಿಪಡಿಲಾಗದ ರೀತಿಯಲ್ಲಿ ಹಾನಿಯಾಗುತ್ತಿದೆ. ಸಂವಿಧಾನದಲ್ಲಿ ನೀಡಿದ ಕರ್ತವ್ಯ ಪಾಲಿಸಿದರೆ ಪರಿಸರ ಹಾನಿಯನ್ನು ತಡೆಯಬಹುದು ಎಮದರು.
ಸಂವಿಧಾನದ ಅಂಶ ಮನನ ಮಾಡಿ ನಾವು ಅಳವಡಿಸಿಕೊಳ್ಳುವುದರ ಜೊತೆಗೆ ಅಕ್ಕಪಕ್ಕದವರಿಗೂ ಅರಿವು ಮೂಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್ ಎಸ್ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ವಿ.ಸುರೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಉಪನ್ಯಾಸಕ ಎಂ.ಪಿ.ನಾಗೇಂದ್ರ ಮೂರ್ತಿ, ಪ್ಯಾನಲ್ ವಕೀಲರಾದ ಆಯೆಷಾ ಭಾನು ಉಪಸ್ಥಿತರಿದ್ದರು.

Leave a Comment