ಪ್ರೌಢಶಾಲೆಗಳನ್ನು 12 ತರಗತಿಯವರೆಗೆ ವಿಸ್ತರಿಸಲು ಮನವಿ

ದಾವಣಗೆರೆ, ಅ. 20 ರಾಜ್ಯದ ಎಲ್ಲಾ ಪ್ರೌಢಶಾಲೆಗಳನ್ನು 12 ತರಗತಿಯವರೆಗೆ ವಿಸ್ತರಿಸಬೇಕು ಹಾಗೂ 2018-19, 2019-20ನೇ ಸಾಲಿನ ಆರ್ ಟಿ ಇ ಶುಲ್ಕ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಶಾಶ್ವತ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಶಿಕ್ಷಣ ನೀತಿ ಅನ್ವಯ 1 ರಿಂದ 5ನೇ ತರಗತಿ ಪ್ರಾಥಮಿಕ, 6 ರಿಂದ 8 ನೇತರಗತಿ ಹಿರಿಯ ಪ್ರಾಥಮಿಕ ಹಾಗು 9 ರಿಂದ 12ನೇ ತರಗತಿ ಪ್ರೌಢಶಾಲೆಯಾಗಿದೆ. ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದೇ ನೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಮೀನಾಮೇಷ ಮಾಡಲಾಗುತ್ತಿದೆ. ರಾಜ್ಯದಲ್ಲಿ ನೂತನವಾಗಿ ಪ್ರೌಢಶಾಲೆ ಪ್ರಾರಂಭಿಸಲು ಅರ್ಜಿ ಸಲ್ಲಿಸಿದರೆ ಕೇವಲ 9 ಮತ್ತು 10ನೇ ತರಗತಿ ಮಾತ್ರ ನಮೂದಿಸಿ ಅನುಮತಿ ನೀಡಲಾಗುತ್ತಿದೆ. ಶಿಕ್ಷಣ ಸಚಿವರು ಈ ಬಗ್ಗೆ ಕೂಡಲೇ ಗಮನಹರಿಸಿ ಕೇಂದ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು. ಪ್ರೌಢಶಾಲೆಗೆ ಅನುಮತಿ ನೀಡುವ ವೇಳೆ 9 ರಿಂದ 12ನೇ ತರಗತಿಯವರೆಗೆ ಎಂದು ನಮೂದಿಸಬೇಕು. ಮೂಲಭೂತ ಸೌಕರ್ಯವಿರುವ ಎಲ್ಲಾ ಖಾಸಗಿ ಪ್ರೌಢಶಾಲೆಗಳಿಗೆ ಹೆಚ್ಚುವರಿ 11 ಮತ್ತು 12 ತರಗತಿಗಳಿಗೂ ಪ್ರಾರಂಭಿಸಲು ಅನುಮತಿ ನೀಡಬೇಕು. ಹಾಗೂ 2018-19ನೇ ಸಾಲಿನ ಆರ್ ಟಿ ಶುಲ್ಕ ಮರುಪಾವತಿಯಾಗಿಲ್ಲ. ಈ ಬಗ್ಗೆ ಇಲಾಖೆ ಮತ್ತು ಸರ್ಕಾರದ ಗಮನಕ್ಕೆ ತರಲಾಗಿದೆ. 36 ಶಾಲೆಗಳಿಗೆ 55 ಲಕ್ಷ ಮೊತ್ತ  ಬಿಡುಗಡೆಯಾಗಿಲ್ಲ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನ ಆರ್ ಟಿ ಶುಲ್ಕ ಮರುಪಾವತಿಯನ್ನು ಕಳೆದ ಬಾರಿಯಂತೆ ವಿಳಂಬ ನೀತಿ ಅನುಸರಿಸದೆ ಅಕ್ಟೋಬರ್ ತಿಂಗಳಲ್ಲಿ ಶೇ, 50 ರಷ್ಟು ಹಾಗೂ ಜನವರಿ ತಿಂಗಳಲ್ಲಿ ಶೇ. 50 ರಷ್ಟು ಬಿಡುಗಡೆ ಮಾಡುವ ಮೂಲಕ ಆರ್ ಟಿ ಇ ಶಾಲೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಕಂದನಕೋವಿ ಪ್ರಕಾಶ್, ಎಂ.ಎನ್.ಮಲ್ಲೇಶ್, ಹೆಚ್.ಜಿ.ಪ್ರಕಾಶ್, ವೀರೇಶ್, ಬಿರಾದಾರ್, ಮಂಜುನಾಥ್ ಸ್ವಾಮಿ, ದಿನೇಶ್, ಅಂಗಡಿ ಮಂಜುನಾಥ್  ಮತ್ತಿತರರಿದ್ದರು.

Leave a Comment