ಪ್ರೋತ್ಸಾಹಧನ ಚೆಕ್ ವಿತರಣೆ

ಪಾಂಡವಪುರ:ಫೆ:13- ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಸಾಗಾಣಿಕೆ ಮಾಡಲು ವಾಹನ ಖರೀದಿಗೆ ನೀಡುವ 10 ಸಾವಿರ ರೂ.ಪ್ರೋತ್ಸಾಹಧನದ ಚೆಕ್‍ನ್ನು ಲಕ್ಷ್ಮೀಸಾಗರ ಜಿಪಂ ಸದಸ್ಯೆ ಶಾಂತಲರಾಮಕೃಷ್ಣೇಗೌಡ ವಿತರಣೆ ಮಾಡಿದರು.
ಪಟ್ಟಣದ ಮೀನುಗಾರಿಕೆ ಇಲಾಖೆಯ ಆವರಣದಲ್ಲಿ ಫಲಾನುಭವಿ ಕುಮಾರ್ ಅವರಿಗೆ ಚೆಕ್ ವಿತರಣೆ ಮಾಡಿ ನಂತರ ಮಾತನಾಡಿದ ಅವರು, ಮೀನುಸಾಗಾಣಿಕೆ, ಮೀನುಮಾರಾಟ ಮಾಡುವವರಿಗೆ ಮೀನುಗಾರಿಕೆ ಇಲಾಖೆಯಿಂದ ಹೆಚ್ಚು ಅನುದಾನ, ಪ್ರೋತ್ಸಾಹ ಹಣವನ್ನು ಹೆಚ್ಚಿನ ಮಟ್ಟದಲ್ಲಿ ವಿತರಣೆ ಮಾಡುವ ಮೂಲಕ ಮೀನು ಕೃಷಿಕರನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.
ಹಗಲು ರಾತ್ರಿ ಎನ್ನದೆ ಕೆರೆಕಟ್ಟೆಗಳಲ್ಲಿ ಜೀವದ ಹಂಗುತೊರೆದು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೀನುಗಾರಿಕೆ ಕುಟುಂಬಗಳಿಗೆ ಸರಕಾರಗಳು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಮಾಡಬೇಕಾಗಿದೆ. ಕಾಲಕಾಲಕ್ಕೆ ದೋಣಿ, ಬಲೆಗಳು ಹಾಗೂ ಮೀನುಸಾಗಾಣಿಕೆ ಮಾಡಲು ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಪೂರ್ಣಿಮಾವೆಂಕಟೇಶ್, ಗ್ರಾಪಂ ಸದಸ್ಯರಾದ ನಾಗರಾಜು, ರವಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ಕೆ.ಜೆ. ಮಹೇಶ್ವರ, ಫೀಲ್ಡ್ ಆಫೀಸರ್ ನಂದೀಶ್, ಮುಖಂಡ ಲಕ್ಷ್ಮೀಸಾಗರ ಅಶೋಕ್ ಹಾಜರಿದ್ದರು.

Leave a Comment