ಪ್ರೊಫೆಸರ್ ಮನೆಮೇಲೆ ಪೊಲೀಸ್ ದಾಳಿಗೆ ಖಂಡನೆ

ನವದೆಹಲಿ, ಸೆ. ೧೧: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವರೆಂಬ ಆರೋಪದ ಮೇಲೆ, ೨೦೧೭ರ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ಹ್ಯಾನಿ ಬಾಬು ಅವರ ನೊಯ್ಡಾ ನಿವಾಸದ ಮೇಲೆ ಪುಣೆ ಪೊಲೀಸರು ನಡೆಸಿದ ದಾಳಿಯನ್ನು ಜವಹರ್‌ಲಾಲ್ ನೆಹರೂ ವಿ.ವಿ. ಶಿಕ್ಷಕರ ಸಂಘ (ಜೆಎನ್‌ಯು ಟಿಎ) ಇಂದು ಖಂಡಿಸಿದೆ.

‘ಈ ದಾಳಿ ಪ್ರಯತ್ನವು ಬಾಬು ಅವರನ್ನು ಬೆದರಿಸುವ ಮತ್ತು ಕಿರುಕುಳ ನೀಡುವ ಉದ್ದೇಶದ್ದಾಗಿದೆ’ ಎಂದು ಅದು ಟೀಕಿಸಿದೆ. ರಾಜಧಾನಿ ದೆಹಲಿಗೆ ಹೊಂದಿಕೊಂಡ ನೋಯ್ಡಾದ ೭೮ನೇ ವಲಯದಲ್ಲಿನ ೪೫ ವರ್ಷದ ಬಾಬು ಅವರ ನಿವಾಸದ ಮೇಲೆ ಪುಣೆ ಪೊಲೀಸರು ನಿನ್ನೆ ದಾಳಿ ನಡೆಸಿ ಶೋಧಿಸಿದ್ದರು. ಈ ಸಂದರ್ಭದಲ್ಲಿ ಬಾಬು ಅವರನ್ನು ಬಂಧಿಸಿಲ್ಲ ಎಂದು ಪುಣೆ ಪೊಲೀಸ್ ಸಹಾಯಕ ಆಯುಕ್ತ ಶಿವಾಜಿ ಪವಾರ್ ಸ್ಪಷ್ಟಪಡಿಸಿದ್ದಾರೆ.

‘ಹಾಲಿ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಚಳವಳಿಗಾರರನ್ನು, ಬರಹಗಾರರನ್ನು, ಪ್ರೊಫೆಸರ್‌ಗಳನ್ನು, ಪತ್ರಕರ್ತರನ್ನು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ಬೆದರಿಸುವ ಮತ್ತು ಅವರುಗಳನ್ನು ಸುಮ್ಮನಾಗಿಸುವ ಮತ್ತೊಂದು ಪ್ರಯತ್ನ ಇದಾಗಿದೆ’ ಎಂದು ಜೆಎನ್‌ಯುಟಿಎ ಪ್ರತ್ಯಾರೋಪ ಮಾಡಿದೆ.

Leave a Comment