ಪ್ರೇಯಸಿ ಜೊತೆಗಿದ್ದ ಪ್ರೇಮಿಯ ಕೈ ಕತ್ತರಿಸಿ ಕೊಂಡೊಯ್ದರು

ಬೆಂಗಳೂರು, ಸೆ. ೧೨-ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿ ಪತಿಯನ್ನು ಬಿಟ್ಟಿದ್ದ ಪ್ರೇಯಸಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯೊಬ್ಬನ ಮುಂಗೈಯನ್ನು ಕತ್ತರಿಸಿದ ಅಮಾನವೀಯ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದ ಬೆಟ್ಟದ ಬಳಿ ನಡೆದಿದೆ.

ಮಧುಗಿರಿ ತಾಲೂಕಿನ ಮಿಡಿಗೇಶಿಯ ರವೀಶ್ (೩೨) ಕೈ ಕಳೆದುಕೊಂಡ ಪ್ರೇಮಿಯಾಗಿದ್ದಾನೆ. ಮುಂಗೈ ಕತ್ತರಿಸಿ ಗಂಭೀರವಾಗಿ ಗಾಯಗೊಂಡಿರುವ ರವೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಿತ್ರದುರ್ಗ ಮೂಲದ ಪ್ರೇಯಸಿ(೨೫)ಯು ತಮ್ಮದೇ ಜಿಲ್ಲೆಯ ಯುವಕನೊಬ್ಬನನ್ನು ಒಂದು ತಿಂಗಳ ಹಿಂದೆ ವಿವಾಹವಾಗಿದ್ದು ಆತನನ್ನು ತೊರೆದು ಬಂದಿದ್ದಳು ಮೊದಲಿನಿಂದಲೂ ರವೀಶ್‌ನನ್ನು ಆಕೆ ಪ್ರೀತಿಸುತಿದ್ದು ನಗರದ ಪೊಲೀಸ್ ಠಾಣೆಯೊಂದರಲ್ಲಿ ಗೃಹರಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು
ಎಲೆಕ್ಟ್ರಿಕಲ್ ಗುತ್ತಿಗೆದಾರನಾಗಿ ರವೀಶ್ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ, ಪ್ರೇಯಸಿ ವಿವಾಹವಾಗಿದ್ದ ಪತಿಯ ಕಡೆಯವರು ಕೈ ಕತ್ತರಿಸಿ ಪರಾರಿಯಾಗಿರುವ ಶಂಕೆಯಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.
ಕತ್ತರಿಸಿ ಕೊಂಡೊಯ್ದರು
ರವೀಶ್ ಮತ್ತು ಆತನ ಪ್ರೇಯಸಿ ನಿನ್ನೆ ಸಂಜೆ ೭ರ ವೇಳೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ ೩ ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಿ ಏಕಾಂತ ಬಯಸಿ ಕುಳಿತಿದ್ದಾಗ ಬಂದ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದಾರೆ.
ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಸ್ಥಳೀಯರ ಸಹಾಯದಿಂದ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಂಗಾಲಾದ ಪ್ರೇಯಸಿ
ಘಟನೆಯಿಂದಾಗಿ ಯುವತಿ ಗಾಬರಿಗೊಂಡಿದ್ದು, ದಾಳಿ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.ಎಷ್ಟು ಜನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಕೇಳಿದ ಪ್ರಶ್ನೆಗೆ ಒಂದು ಬಾರಿ ಇಬ್ಬರು ಎಂದರೆ, ಮತ್ತೊಮ್ಮೆ ಮೂವರು ಎಂದು ಹೇಳುತ್ತಿದ್ದಾಳೆ. ಯಾವುದೇ ಮಾಹಿತಿ ಕೇಳಿದರೂ ಗೊಂದಲದ ಉತ್ತರ ನೀಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a Comment