ಪ್ರೇಕ್ಷಕ ಏನ್ಮಾಡ ಲೀ…

ಚಿತ್ರ : ಲೀ
ನಿರ್ಮಾಣ : ಸಾರಥಿ ಸತೀಶ್, ದರ್ಶನ್ ಕೃಷ್ಣ, ಎಸ್. ಬಿ. ವಿನಯ್
ನಿರ್ದೇಶನ : ಶ್ರೀನಂದನ್
ತಾರಾಗಣ : ಸುಮಂತ್ ಶೈಲೇಂದ್ರ, ನಭಾ ನಟೇಶ್, ತಬಲ ನಾಣಿ, ಸುಚೇಂದ್ರ ಪ್ರಸಾದ್, ಚಿಕ್ಕಣ್ಣ ಮುಂತಾದವರು.
ರೇಟಿಂಗ್ : **
ಹಿಂದು ಮತ್ತು ಕ್ರಿಶ್ಚಿಯನ್ ಧರ್ಮದ ಹುಡುಗ ಹುಡುಗಿ ಪ್ರೀತಿಸಿದಾಗ ಅವರ ಮನೆಯವರು ಅಡ್ಡಿಯಾಗುತ್ತಾರೆ. ಮನೆ ಬಿಡುವ ಹುಡುಗ ಹುಡುಗಿ ಹಳ್ಳಿಯಿಂದ ನಗರಕ್ಕೆ ಬರುತ್ತಾರೆ. ಅಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗುವ ಅವರು ಭೂಗತಜಗತ್ತಿನವರ
ಕ್ರೌರ್ಯಕ್ಕೆ ಸಿಕ್ಕಿ ಹುಡುಗ ಹುಚ್ಚನಾಗುತ್ತಾನೆ ಹುಡುಗಿ ಅವರ ಸೆರೆಯಾಗುತ್ತಾಳೆ. ಹುಡುಗ ಸಾಹಸ ಕಲೆಯಲ್ಲಿ ಪರಿಣಿತನಾಗಿರುತ್ತಾನೆ ಅವನ ನೆನಪು ಮರಳಿದಾಗ ಪ್ರೇಕ್ಷರು ಏನು ನಿರೀಕ್ಷೆ ಮಾಡುತ್ತಾರೊ ಅದೇ ಕ್ಲೈಮ್ಯಾಕ್ಸ್‌ನಲ್ಲಿ ನಡೆಯುತ್ತದೆ. ಇದಿಷ್ಟು ಲೀ ಚಿತ್ರದ ನಿಜವಾದ ಕಥೆ.
ಈ ಕಥೆಯನ್ನೇ ವಿಭಿನ್ನ ನಿರೂಪಣೆಯಲ್ಲಿ ಕೊಡಲು ಸಾಧ್ಯವಾಗಿದ್ದರೂ ಲೀ ಚಿತ್ರ ಸೆಳೆದುಕೊಳ್ಳುತ್ತಿತ್ತು. ಆದರೆ ನಿರ್ದೇಶಕ ಶ್ರೀನಂದನ್ ಕಮರ್ಷಿಯಲ್ ಚಿತ್ರವೆಂದರೆ ಇಂತಿಂಥ ಮಸಾಲೆ ಇರಲೇಬೇಕು ಎನ್ನುವ ನಿರ್ಧಾರಕ್ಕೆ ಸಿಕ್ಕಿದ್ದಾರೆ. ಈ ಕಾರಣದಿಂದಾಗಿ ಅವರು ಯಾವ ಕಥೆ ಹೇಳಲು ಹೊರಟಿದ್ದಾರೆನ್ನುವುದನ್ನೇ ಮರೆತು ಏನೆಲ್ಲಾ ಕಥೆಗಳನ್ನು ತಂದು ದಿಕ್ಕುತಪ್ಪಿದ್ದಾರೆ. ಚಿತ್ರ ಆರಂಭದಲ್ಲಿ ಇದೊಂದು ವಿಶಿಷ್ಟವಾದ ಉಷ್ ಎಂಬ ಸಾಹಸ ಕಲೆ ಹೊಂದಿರುವುದರಿಂದ ಲೀ ಎಂಬ ಹೆಸರಿದೆ ಎಂದಿದ್ದರು ನಂತರದಲ್ಲಿ ಶೀರ್ಷಿಕೆಯ ಮೇಲ್ಬರಹದಲ್ಲಿ ಇರುವ ನನ್ನ ಲೀ ಮೊದಲು ನಿನ್ನ ಲೀ ಕೊನೆ ಎಂದಿರುವುದೇ ಲೀ ಎಂದರು. ಚಿತ್ರ ನೋಡುವ ಪ್ರೇಕ್ಷಕರು ಆ ಎರಡೂ ಲೀನ ಬಿಟ್ಟು ಚಿತ್ರಕ್ಕೆ ಬಂದಿದ್ದಾಗಿದೆ ನಾನೀಗ ಏನ್ಮಾಡ ಲೀ? ಅಂತಲೂ ಅಂದುಕೊಳ್ಳಬಹುದು.
ಚಿತ್ರದ ಮಧ್ಯಂತರದ ನಂತರದ ಭಾಗವನ್ನು ಶ್ರೀನಂದನ್ ಮೊದಲಾರ್ಧವಾಗಿ ತಂದಿದ್ದರೂ ಚೆನ್ನಾಗಿರುತ್ತಿತ್ತು. ಬಹುಶಃ ಏನೋ ಕಥೆ ಹೇಳುತ್ತಿದ್ದಾರೆನ್ನುವುದಾದರೂ ಇರುತ್ತಿತ್ತು. ನಾಯಿ, ಕತ್ತೆ, ಕುದುರೆ ಮತ್ತು ಕುರಿಯ ಭಾವನೆಗಳ ಮೂಲಕ ಚಿತ್ರದಲ್ಲಿ ಫ್ಲಾಶ್‌ಬ್ಯಾಕ್‌ನ ನಿರೂಪಿಸಿರುವುದು ಹೊಸತನದಲ್ಲಿ ಕಾಣಿಸುತ್ತದೆ. ನಿರ್ದೇಶಕರ ನಟನಾಗಿ ಪಳಗುತ್ತಿರುವ ಸುಮಂತ್ ಶೈಲೇಂದ್ರ ಮಾರ್ಷಲ್ ಆರ್ಟ್‌ನಲ್ಲಿಯೇ ಹೆಚ್ಚು ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ನಭಾ ನಟೇಶ್‌ಗಿಂತ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ನೇಹ ನಟನೆ ಸೆಳೆಯುತ್ತದೆ. ನಂದಕುಮಾರ್ ಛಾಯಾಗ್ರಹಣದಲ್ಲಿ ಹಾಡುಗಳಲ್ಲಿ ಹೆಚ್ಚು ಇಷ್ಟವಾಗುತ್ತದೆ. ಸಾಧುಕೋಕಿಲ ಮತ್ತು ಚಿಕ್ಕಣ್ಣ ತೆರೆಮೇಲೆ ಕಾಣಿಸಿಕೊಂಡಾಗ ಎಂದಿನ ಅವರ ಆಭಿಮಾನಿಗಳ ಶಿಳ್ಳೆ ಬೀಳುತ್ತದೆ. ಅಚ್ಯುತ್‌ಕುಮಾರ್, ಸುಚೇಂದ್ರ ಪ್ರಸಾದ್, ತಬಲನಾಣಿ ಸಣ್ಣ ಪಾತ್ರಗಳಲ್ಲೂ ತಮ್ಮ ಕೆಲಸ ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ.
-ಕೆ.ಬಿ. ಪಂಕಜ

Leave a Comment