ಪ್ರೇಕ್ಷಕರ ಬಳಿಗೆ ಅಲ್ಲಮ

ಸಂತಶಿಶುನಾಳಷರೀಫ, ಮೈಸೂರುಮಲ್ಲಿಗೆ,ನಾಗಮಂಡಲ ಚಿತ್ರಗಳಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹರಿ.ಎಲ್.ಖೋಡೆ ನಿರ್ಮಿಸಿರುವ ಅಲ್ಲಮ ಮುಂದಿನ ವಾರ ಬಿಡುಗಡೆಯಾಗಲಿದೆ.

ಈಗಾಗಲೇ ಚಲನ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಅಲ್ಲಮ ಚಿತ್ರವನ್ನು ಜನರಿಗೆ ತಲುಪಿಸಬೇಕೆಂಬ ಅದಮ್ಯ ಬಯಕೆಯಿಂದ ಉತ್ತರ ಕರ್ನಾಟಕದಲ್ಲಿ ಶರಣ ಸಾಹಿತ್ಯ ಪರಿಷತ್, ಸಾಹಿತಿಗಳ ಗುಂಪೊಂದು ವೈಯಕ್ತಿಕ ಆಸಕ್ತಿವಹಿಸಿದೆ.

ಚಿತ್ರದಲ್ಲಿರುವ ಕತೆಯಲ್ಲಿ ಅಲ್ಲಮ ತಾಯಿಯ ವಾತ್ಸಲ್ಯ, ಮದ್ದಳೆಯ ಮೇಲಿನ ವ್ಯಾಮೋಹ ತೊರೆದು, ಜ್ಞಾನದ ಹಾದಿಯಲ್ಲಿ ನಡೆ ಎಂದು ಗುರುವು ಹೇಳುವಂತೆ, ಮಾಯೆಯನ್ನು ಗೆದ್ದು ಅಂತಿಮವಾಗಿ ಅನಿಮಿಷಯ್ಯನ ಕೃಪೆಯಿಂದ ಆತ್ಮಲಿಂಗವನ್ನು ಪಡೆದು ಅಲ್ಲಮಪ್ರಭುವಾಗುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಜಾತಿ ಪದ್ಧತಿ ಮತ್ತು ಮನುಷ್ಯರಲ್ಲಿರುವ ಅಸಮಾನತೆಯನ್ನು ಅಲ್ಲಗಳೆದು, ಕಲ್ಯಾಣದಲ್ಲಿ ಬಸವಣ್ಣರ ಮೇಲೆ ಪ್ರಭಾವ ಬೀರುತ್ತಾನೆ. ಇವೆಲ್ಲವೂ ಚಿತ್ರದಲ್ಲಿ ದೃಶ್ಯಗಳ ಮೂಲಕ ಮೂಡಿಬಂದಿದೆ.

ಅಲ್ಲಮನಾಗಿ ಧನಂಜಯ, ಮಾಯೆಯಾಗಿ ಮೇಘನರಾಜ್ ನಾಯಕಿ. ಅಮ್ಮನಾಗಿ ಲಕ್ಷೀಗೋಪಾಲಸ್ವಾಮಿ, ಸಂಚಾರಿ      ವಿಜಯ್ ಬಸವಣ್ಣನ ಪಾತ್ರದಲ್ಲಿ, ಹಿರಿಯ ನಟ ರಾಮಕೃಷ್ಣ ಅಲ್ಲಮನ ಗುರುವಾಗಿ ಇನ್ನು ಮುಂತಾದವರು ನಟನೆ ಮಾಡಿದ್ದಾರೆ.  ಬಾಲ್ಯವನ್ನು ಹೇಳುವ ಗೀತೆಗೆ ದೊಡ್ಡರಂಗೇಗೌಡ ಸಾಹಿತ್ಯವಿದೆ.

ಬಸವಣ್ಣ ಮತ್ತು ಅಕ್ಕಮಹಾದೇವಿಯ ಒಂದು ವಚನ, ಅಲ್ಲಮನ ವಚನಗಳನ್ನು  ಬಳಸಲಾಗಿದೆ. ಸಂಗೀತ ಬಾಪುಪದ್ಮನಾಭ,  ಕಲಾನಿರ್ದೇಶನ ಶಶಿಧರಅಡಪ, ಛಾಯಗ್ರಹಣ ಜಿ.ಎಸ್.ಭಾಸ್ಕರ್ ಅವರದಾಗಿದೆ. ಚಿತ್ರವು ಜನವರಿ ೨೬ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಮುಂದೆ ಸಾಧಕ ಉಮರ್‌ಖಯ್ಯಾಂ ಕುರಿತ ಸಿನಿಮಾ ಮಾಡಲು ತಂಡವು ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ನಿರ್ದೇಶಕ ನಾಗಭರಣ ಹೇಳಿಕೊಂಡರು.

Leave a Comment