‘ಪ್ರೀತಿ’ ವಿಚಾರದಲ್ಲಿ ಅವಮಾನ ಯುವಕ ಆತ್ಮಹತ್ಯೆ, ಯುವತಿ ಗಂಭೀರ

ತಿರುವನಂತಪುರಂ, ನ.೧೩- ಪ್ರೀತಿ ವಿಚಾರವಾಗಿ ಕುಟುಂಬದ ಮುಂದೆಯೇ ಅವಮಾನ ಮಾಡಿದ್ದಕ್ಕೆ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂತ್ರಸ್ತನನ್ನು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಮೂಲದ ಶಾಹೀರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮುಂದೆ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅವಮಾನ ಮಾಡಿದ್ದಾರೆ ಎಂದು ನೊಂದುಕೊಂಡು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಹೀರ್ ಸ್ಥಳೀಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದು ಹುಡುಗಿಯರ ಸಂಬಂಧಿಕರಿಗೆ ತಿಳಿದಿದೆ. ಆಗ ಹುಡುಗಿಯ ಕಡೆಯವರು ಆತನನ್ನು ಸುತ್ತುವರಿದು ಯುವಕನ ಕುಟುಂಬದವರ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬದ ಹುಡುಗಿಯನ್ನೇ ಪ್ರೀತಿಸಲು ಧೈರ್ಯ ಮಾಡಿದ್ದೀಯಾ ಎಂದು ಹೆತ್ತವರ ಮುಂದೆಯೇ ಹೊಡೆದಿದ್ದಾರೆ. ಈ ವೇಳೆ ಶಾಹೀರ್ ಸಹೋದರ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ ಹುಡುಗಿಯ ಸಂಬಂಧಿಕರು ಅವನನ್ನೂ ಹೊಡೆದಿದ್ದಾರೆ. ಶಾಹೀರ್ ಸಹೋದರನಿಗೂ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೀತಿ ವಿಚಾರ ಬಹಿರಂಗವಾಗಿದ್ದಕ್ಕೆ ಹಾಗೂ ಹಿಂಸಾಚಾರ ನಡೆದಿದ್ದನ್ನು ಸಹಿಸಲಾಗದೆ ಹುಡುಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾಳೆ. ಅವಳ ಸ್ಥಿತಿ ಗಂಭೀರವಾಗಿದೆ. ಅತ್ತ ಶಾಹೀರ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಲಪ್ಪುರಂ ಪೊಲೀಸರು ೧೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment