ಪ್ರೀತಿಯೋ ಪ್ರತಿಭೆಯೋ… ಅಜರಾಮರದಲ್ಲಿ ಅನಾವರಣ

-ಚಿಕ್ಕನೆಟಕುಂಟೆ ಜಿ. ರಮೇಶ್
ಬಹುತೇಕ ಹೊಸಬರ ತಂಡ ಹೊಸ ಆಲೋಚನೆ ಮತ್ತು ಕನಸಿನೊಂದಿಗೆ ’ಅಜರಾಮರ’ ಚಿತ್ರವನ್ನು ಸದ್ದುಗದ್ದಲವಿಲ್ಲದೆ ಪೂರ್ಣಗೊಳಿಸಿದೆ. ಪ್ರತಿಭೆ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸಗಳು ಮತ್ತು ಸಂಬಂಧಗಳ ಮಿಶ್ರಣವಾಗಿರುವ ಚಿತ್ರದಲ್ಲಿ, ಪ್ರೀತಿ,ಪ್ರತಿಭೆಯಲ್ಲಿ ಯಾವುದು ಮುಖ್ಯ ಎನ್ನುವುದನ್ನು ಚಿತ್ರದ ಕೊನೆಯಲ್ಲಿ ಅನಾವರಣ ಮಾಡಲಾಗಿದೆಯಂತೆ. ಅದನ್ನು ನೋಡಲು ಚಿತ್ರ ಬಿಡುಗಡೆಯವರೆಗೆ ಕಾಯಬೇಕು.

ರವಿಕಾರಂಜಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ’ಅಜರಾಮರ’ ಚಿತ್ರಕ್ಕೆ ಡಾ.ಡೇವಿಡ್ ಬಾಂಜಿ ಬಂಡವಾಳ ಹಾಕಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಅಭಯ್ ಜಿ.ಗಂಜ್ಯಾಳ ಮತ್ತು ರೇಣುಕಾ ಪ್ರಸಾದ್ ಸಾಥ್ ನೀಡಿದ್ದಾರೆ. ಚಿತ್ರವನ್ನು ಮೈಸೂರು ,ಹುಬ್ಬಳ್ಳಿ, ತುಮಕೂರು,ಬೀದರ್,ಬೆಳಗಾವಿ ಸೇರಿದಂತೆ ವಿವಿಧ ಕಡೆ ೭೫ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ಮೂಲಕ ತಾರಕ್ ಮತ್ತು ರೋಶಿನಿ ಎಂಬ ಹೊಸ ಮುಖಗಳು ಚಂದನವನಕ್ಕೆ ಪರಿಚಯವಾಗಿದ್ದಾರೆ. ಹೊಸಬರೇ ಸೇರಿಕೊಂಡು ನಿರ್ಮಿಸಿ ನಿರ್ದೇಶಿಸಿರುವ ಚಿತ್ರ ಇದು. ಕಳೆದವಾರ ಚಿತ್ರದ ಟೀಸರ್ ಮತ್ತು ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಸೇರಿದಂತೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ಈ ವೇಳೆ ಚಿತ್ರದ ಬಗ್ಗೆ ವಿವಿರ ನೀಡಿದ ನಿರ್ದೇಶಕ ರವಿಕಾರಂಜಿ, ಪ್ರೀತಿ, ಕಾಮಿಡಿ, ಫಿಲಿಂಗ್ಸ್‌ಗಳನ್ನು ಮಿಕ್ಸ್ ಮಾಡಿ ಚಿತ್ರ ಮಾಡಲಾಗಿದೆ. ಸಂಪೂರ್ಣ ಮನರಂಜನೆಗೆ ಆದ್ಯತೆ ನೀಡಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಪ್ರಮುಖವಾಗಿ ಪ್ರೀತಿ ಮತ್ತು ಪ್ರತಿಭೆಗಳ ಸುತ್ತಾ ಚಿತ್ರೀಕರಣ ಮಾಡಲಾಗಿದೆ. ಯಶಸ್ಸು ಪಡೆಯಲು ಪ್ರೀತಿ ಮುಖ್ಯವೋ ಇಲ್ಲವೋ ಪ್ರತಿಭೆಯೋ ಎನ್ನುವುದು ಚಿತ್ರದ ತಿರುಳು. ಹತ್ತು ನಿಮಿಷಗಳ ಕಂಪ್ಯೂಟರ್ ಕೆಲಸ (ಸಿ.ಜಿ ವರ್ಕ್ಸ್) ಮಾಡಲಾಗಿದೆ. ಒಳ್ಳೆಯ ಚಿತ್ರ ನೀಡುವ ಉದ್ದೇಶವೊಂದಲಾಗಿದೆ. ಎಲ್ಲರ ಪ್ರೀತಿ ಮತ್ತು ಸಹಕಾರ ಚಿತ್ರಕ್ಕೆ ಇರಲಿ ಹೊಸ ತಂಡ ಎಲ್ಲರನ್ನು ರಂಜಿಸಲಿದೆ ಎನ್ನುವ ವಿಶ್ವಾಸ ನಿರ್ದೇಶಕರದ್ದು.

ನಿರ್ಮಾಪಕ ಡಾ. ಡೇವಿಡ್ ಬಾಂಜಿ,ಜನರಿಗೆ ಇಷ್ಟವಾಗುವ ಚಿತ್ರವಾಗಲಿದೆ ಎನ್ನುವ ವಿಶ್ವಾಸ ನಮ್ಮದು. ಚಿತ್ರತಂಡದ ಪ್ರತಿಯೊಬ್ಬರೂ ಪ್ರಯತ್ನ ಮೀರಿ ಕೆಲಸ ಮಾಡಿದ್ದಾರೆ. ನಿರ್ದೇಶಕರ ಪ್ರತಿಭೆಯ ಮೇಲೆ ನಂಬಿಕೆ ಇತ್ತು ಹೀಗಾಗಿ ಅವರ ಕೆಲಸದಲ್ಲಿ ಮೂಗು ತೂರಿಸುವ ಕೆಲಸ ಮಾಡಿಲ್ಲ. ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಅದನ್ನು ನಿರ್ದೇಶಕರು ಸದುಪಯೋಗ ಪಡಿಸಿಕೊಂಡು ಉತ್ತಮ ಚಿತ್ರ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ಸಹ ನಿರ್ಮಾಪಕರಾದ ಅಭಯ್ ಜಿ.ಗಂಜ್ಯಾಳ ಮತ್ತು ರೇಣುಕಾ ಪ್ರಸಾದ್ ಒಳ್ಳೆಯ ಪ್ರಯತ್ನ ಎಂದು ಹೇಳಿದರು. ನಟ ತಾರಕ್, ಮೊದಲ ಚಿತ್ರದಲ್ಲಿ ಉತ್ತಮ ಕಥೆ ಸಿಕ್ಕಿದೆ. ಚಿತ್ರದ ಮೂಲಕ ಚಿತ್ರರಂಗದಲ್ಲಿ ನೆಲೆ ಸಿಗಲಿದೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ಇದೆ. ಪ್ರತಿಭಾವಂತ ಹುಡುಗನ ಪಾತ್ರ ನನ್ನದು. ಒಳ್ಳೆಯ ವಸ್ತುಗಳನ್ನು ನೀಡಿದರೆ ಅದನ್ನು ಬಿಸಾಡುತ್ತೇನೆ. ಆದರೆ ಉಪಯೋಗಕ್ಕೆ ಬಾರದ ವಸ್ತು ನೀಡಿದರೆ ಅದರಲ್ಲಿ ಅದ್ಬುತವಾದುದನ್ನು ಸೃಷ್ಟಿ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆಯುವ ಪಾತ್ರ. ಇಂತಹ ಸಮಯದಲ್ಲಿ ಪ್ರೀತಿಯಲ್ಲಿ ಬೀಳುತ್ತೇನೆ.

ಆಗ ಪ್ರೀತಿ ಮುಖ್ಯವೋ ಇಲ್ಲ ಪ್ರತಿಭೆಯೋ ಎನ್ನುವುದು ಚಿತ್ರದ ತಿರುಳು ಎಂದು ಪಾತ್ರದ ಬಗ್ಗೆ ವಿವರ ನೀಡಿದರು. ನಟಿ ರೋಶಿನಿ, ಸಾಂಪ್ರದಾಯಿಕ ಹುಡುಗಿಯ ಪಾತ್ರ. ನಾಯಕನ ಪ್ರತಿಭೆಯನ್ನು ಗುರಿತಿಸಿ ಪ್ರೋತ್ಸಾಹಿಸುವಂತಹ ಪಾತ್ರ ನನ್ನದು. ಒಳ್ಳೆಯ ಪಾತ್ರ ಸಿಕ್ಕಿದೆ.ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸುತ್ತಾರೆ ಎನ್ನುವ ಅಚಲ ನಂಬಿಕೆ ಇದೆ ಎಂದು ಹೇಳಿಕೊಂಡರು.

ಹಿರಿಯ ಛಾಯಾಗ್ರಾಹಕ ಮನೋಹರ್, ಹೊಸ ಹುಡುಗರ ಜೊತೆ ನಾನು ಕಲಿತಿದ್ದೇನೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ಬಗ್ಗೆ ಯಾವುದೇ ಅನುಮಾನಗಳಿಲ್ಲ ಎಂದು ಮೆಚ್ಚುಗೆಯ ಮಾತನಾಡಿದರು. ಸಂಗೀತ ನಿರ್ದೇಶಕ, ರಾಜ್ ಕಿಶೋರ್ ಚಿತ್ರದಲ್ಲಿ ಐದು ಹಾಡುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಚೆಂದವಾಗಿ ಮೂಡಿ ಬಂದಿವೆ ಎಂದು ವಿವರ ನೀಡಿದರು.

Leave a Comment