ಪ್ರಿಯಾಂಕ ರೆಡ್ಡಿ ಪ್ರಕರಣ : ಮರಣದಂಡನೆ ಶಿಕ್ಷೆಗೆ ಎಬಿವಿಪಿ ಆಗ್ರಹ

ಹುಬ್ಬಳ್ಳಿ, ಡಿ.2- ಹೈದರಾಬಾದ್ ನಲ್ಲಿ ಪಶುವೈದ್ಯ ಪ್ರೀಯಂಕಾ ರೆಡ್ಡಿಯವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ ಕೊಲೆ ಮಾಡಿದ ಅಪರಾಧಿಗಳಿಗೆ ಕೂಡಲೇ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಇನ್ನೂ ಪ್ರೀಯಂಕಾ ರೆಡ್ಡಿಯವರ ಮೇಲೆ ನಡೆದ ಅಮಾನವೀಯ ಘಟನೆಯನ್ನು ಖಂಡಿಸಿ ಇಂದು ಎಪಿವಿಪಿಯಿಂದ ರಾಷ್ಟ್ರದಾದ್ಯಂತ ಹೋರಾಟ ನಡೆಸಲಾಗುತ್ತಿದ್ದು, ಅದೇ ರೀತಿ ನಗರದಲ್ಲೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಪರಾಧಿಗಳ ಮರಣದಂಡನೆಗೆ ಆಗ್ರಹಿಸಿದರು. ಅಲ್ಲದೇ ತೆಲಂಗಾಣದ ಗೃಹಮಂತ್ರಿಗಳು ನೀಡಿದ ಹೇಳಿಕೆಯೂ ಕೀಳು ಮಾನಸಿಕತೆಯನ್ನು ಬಿಂಬಿಸುತ್ತಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಬದಲು ಹತ್ಯೆಗೀಡಾದ ವೈದ್ಯರ ಮೇಲೆಯೇ ಪ್ರಶ್ನೆ ಚಿಹ್ನೆ ಕೂರಿಸುವುದು ಚಿಂತಾಜನಕ ಸಂಗತಿಯಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದರು.
ಇನ್ನೂ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಗೈದು ಜೀವಂತವಾಗಿ ದಹನ ಮಾಡಿರುವುದು ಸಮಾಜ ತಲೆ ತಗ್ಗಿಸುವಂತಹ ಸ್ಥಿತಿ ಆಗಿದ್ದು, ಇಂತಹ ಕೆಟ್ಟ ಮನಸ್ಥಿತಿಯ ಜನರನ್ನು ಕೂಡಲೇ ಪಾಸ್ಟ್ ಟ್ರಾಕ್ ಕೋರ್ಟ್ ಮೂಲಕ ಮರಣದಂಡನೆ ವಿಧಿಸಬೇಕು ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ, ಪ್ರಾಂತ ಸಂಘಟನಾ ಕಾರ್ಯದರ್ಶಿಯಾದ ಮಂಜುನಾಥ ಮೀಸೆ, ನಗರ ಅದ್ಯಕ್ಷರಾದ ವಿಜಯಕುಮಾರ ಭಜಂತ್ರಿ, ಉಪಾಧ್ಯಕ್ಷ ಶಿವಾನಂದ ಪೂಜಾರಿ, ಕಾರ್ಯದರ್ಶಿ ಅರುಣ, ರಮೇಶ ವೀರೇಂದ್ರ ಸೇರಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ ನ ನೂರಾರು ಕಾರ್ಯಕರ್ತರು ಇದ್ದರು.

Leave a Comment