ಪ್ರಿಯಾಂಕ ಗಾಂಧಿ ವರ್ಚಸ್ಸು ನಮಗೆ ಶ್ರೀರಕ್ಷೆ – ಸೌಮ್ಯ ರೆಡ್ಡಿ

 

ಬೆಂಗಳೂರು, ಫೆ ೧೨; ಮುಂಬರುವ ಲೋಕಸಭಾ ಚುನಾವಣೆಗೆ ಮಹಿಳಾ ಕಾರ್ಯಕರ್ತರ ಪಡೆಯನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವ ಉದ್ದೇಶದಿಂದ ನಗರದಲ್ಲಿಂದು ಮಹಿಳಾ ಕಾಂಗ್ರೆಸ್‌ನ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಜ್ಯ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಜನಕ್ ಡಿಸೋಜಾ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕಿ ಹಾಗೂ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೌಮ್ಯ ರೆಡ್ಡಿ ಮತ್ತಿತತರ ಮುಖಂಡರು ಚುನಾವಣೆ ಎದುರಿಸುವ ಬಗೆ, ಮತದಾರರನ್ನು ಮನವೊಲಿಸುವ ವಿಧಾನ, ಮತದಾನದ ಮಹತ್ವ ಮತ್ತಿತರ ಅಂಶಗಳಿಗೆ ಒತ್ತು ಕೊಟ್ಟು ತರಬೇತಿ ನೀಡಿದರು.

ಚುನಾವಣಾ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ. ದೇಶದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತಿತರ ಮಹಿಳಾ ಮುಖಂಡರು ಪಕ್ಷ ಸಂಘಟನೆಯಲ್ಲಿ ವಹಿಸಿದ ಪಾತ್ರ, ಭವಿಷ್ಯದಲ್ಲಿ ಮಹಿಳಾ ಕಾರ್ಯಕರ್ತರ ಪಡೆಯ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು.

ಜನಕ್ ಡಿಸೋಜಾ ಮಾತನಾಡಿ, ಬಡತನದಲ್ಲಿದ್ದ ಸ್ವಾತಂತ್ರ್ಯೋತ್ತರದಲ್ಲಿ ಆಧುನಿಕ ಭಾರತ ನಿರ್ಮಾಣ ಮಾಡಿದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಎಲ್ಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ಪ್ರಭಾವ ಪಕ್ಷದ ಮೇಲೆ ಗಟ್ಟಿಯಾಗಿ ಬೇರೂರಿದೆ. ಅವರನ್ನೇ ಮಾದರಿಯಾಗಿಟ್ಟುಕೊಂಡು ಪಕ್ಷ ಕಟ್ಟಬೇಕು. ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ೨೦೦೪ ರಿಂದ ೨೦೧೪ರ ವರೆಗೆ ಎರಡು ಅವಧಿಗೆ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದು, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೌಮ್ಯ ರೆಡ್ಡಿ ಮಾತನಾಡಿ, ಪಕ್ಷವನ್ನು ಬಲಪಡಿಸಲು ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಆಗಮಿಸಿರುವುದು ನಮ್ಮೆಲ್ಲರ ಹುರುಪು, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದಂತಾಗಿದೆ. ಪ್ರಿಯಾಂಕ ಗಾಂಧಿ ಪಕ್ಷಕ್ಕೆ ಶ್ರೀರಕ್ಷೆ ಮತ್ತು ಪ್ರೇರಣೆಯಾಗಿದ್ದು, ಕಾಂಗ್ರೆಸ್ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಮಹಿಳಾ ಕಾರ್ಯಕರ್ತರ ಮೇಲಿದೆ ಎಂದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ. ಮತದಾರರನ್ನು ಮನವೊಲಿಸಿ  ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

Leave a Comment