ಪ್ರಾದೇಶಿಕ ಭಾಷೆಗಳತ್ತ ಪ್ರಿಯಾಂಕ ಚೋಪ್ರಾ ಚಿತ್ತ

ನಾಳಿನ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಿದ್ದತೆ

ಬಾಲಿವುಡ್‌ನಲ್ಲಿ ಮಿಂಚಿ ಹಾಲಿವುಡ್‌ನಲ್ಲಿಯೂ ಗುರುತಿಸಿಕೊಂಡಿರುವ ನಟಿ, ಗಾಯಕಿ, ನಿರ್ಮಪಕಿ ಪ್ರಿಯಾಂಕ ಚೋಪ್ರಾ ಇದೀಗ ತಮ್ಮ ಚಿತ್ತವನ್ನು ಪ್ರಾದೇಶಿಕ ಭಾಷೆಗಳತ್ತ ಹರಿಸಿದ್ದಾರೆ.

ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಚೋಪ್ರಾ,ನೇಪಾಳಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಇದರ ನಡುವೆ ನಾಳೆ ನಡೆಯಲಿರುವ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭದ ನಿರೂಪಣೆಯ ಜವಬ್ದಾರಿ ಪ್ರಿಯಾಂಕ ಹೆಗಲ ಮೇಲೆ ಬಿದ್ದಿದ್ದು ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಸೇರಿದಂತೆ ವಿವಿಧ ಭಾಷೆಗಳ ನಟ,ನಟಿಯರು ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವ ರೀತಿ ಬಟ್ಟೆ ಧರಿಸಬೇಕೆನ್ನುವ ಬಗ್ಗೆ ಸಲಹೆ ನೀಡಿ ಎಂದು ಅವರ ಆಪ್ತರು ಮತ್ತು ಅಭಿಮಾನಿಗಳಲ್ಲಿ ಪಿಗ್ಗಿ ಕೇಳಿಕೊಂಡಿದ್ದಾರೆ.\

ಈಗಾಗಲೇ ಭೋಜ್‌ಪುರಿ, ಪಂಜಾಬಿ ಮತ್ತು ಮರಾಠಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿರುವ ಪ್ರಿಯಾಂಕ ಚೋಪ್ರಾ, ನೇಪಾಳಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಜೊತೆಗೆ ಇತೆರೆ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡುವ ಉದ್ದೇಶ ಅವರಲ್ಲಿದೆ.
ಹೊಸ ವರ್ಷದ ಆರಂಭದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದು ಅದರ ಮುಂದುವರಿದ ಭಾಗ ಎನ್ನುವಂತೆ ನೇಪಾಳಿಯ ಚಿತ್ರ “ಪೌವ” ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪೌವ ಎಂದರೆ ಇಂಗ್ಲೀಷ್‌ನಲ್ಲಿ ಅತಿಥಿ ಎಂದರ್ಥವಂತೆ.
ಈ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಕುರಿತು ಪ್ರಿಯಾಂಕ ಚೋಪ್ರಾ ಖಚಿತ ಪಡಿಸಿದ್ದಾರೆ. ಈ ವರ್ಷ ಐದು ಪ್ರಾದೇಶಿಕ ಭಾಷೆಗಳ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದೇನೆ. ಎಲ್ಲವೂ ಚಿಕ್ಕ ಚಿಕ್ಕ ಬಜೆಟ್ಟಿನ ಚಿತ್ರ. ಜೊತೆಗೆ ಸಾಮಾಜಿಕ ಸಂದೇಶವೂ ಚಿತ್ರದಲ್ಲಿ ಇರಲಿದೆ.
ನೇಪಾಳಿ ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಿದ ಬಳಿಕ ಇನ್ನುಳಿದ ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು. ಈ ಚಿತ್ರದಲ್ಲಿ ನಾನು ನಟಿಸುತ್ತೇನೆಯೇ ಅಥವಾ ಇಲ್ಲವೇ ಎನ್ನುವುದನ್ನು ಈಗಲೇ ಏನನ್ನೂ ಹೇಳಲಾರೆ. ಆದರೆ ಸದ್ಯದ ಯೋಜನೆ ಪ್ರಕಾರ ಬರೀ ನಿರ್ಮಾಣ ಮಾಡೋಣ ಅಂದುಕೊಂಡಿದ್ದೇನೆ. ಮುಂದೆ ಏನಾಗಲಿದೆ ಕಾದು ನೋಡೋಣ ಎಂದಿದ್ದಾರೆ ಪಿಗ್ಗಿ.
ನೇಪಾಳಿಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಅವರನ್ನು ಬೆಳಕಿಗೆ ತರುವ ಜೊತೆಗೆ ಹೊಸ ಮಾದರಿಯ ಚಿತ್ರ ನೀಡಬೇಕೆನ್ನುವ ಉದ್ದೇಶ ಹೊಂದಲಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಒಳ್ಳೆಯ ಕಥೆ ಸಿಕ್ಕಿದೆ, ಕಥೆಯೇ ಚಿತ್ರ ನಿರ್ಮಾಣಕ್ಕೆ ಪೂರಕ ಎನ್ನುವುದು ಅವರ ಸಮಜಾಯಿಷಿ.
ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಮಾಡುವ ಜೊತೆಗೆ ಸಂಗೀತದ ರಿಯಾಲಿಟಿ ಶೋ ನಿರ್ಮಾಣ ಮಾಡುವ ಉದ್ದೇಶ ಪ್ರಿಯಾಂಕ ಅವರಲ್ಲಿದೆ. ಮೊದಲು ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿದ ಬಳಿಕ ಇನ್ನುಳಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸದ್ಯ ನನ್ನ ಮುಂದೆ ಅನೇಕ ಯೋಜನೆಗಳಿವೆ ಅವುಗಳನ್ನೆಲ್ಲಾ ಕೈಗೆತ್ತಿಕೊಳ್ಳಲು ಒಂದಷ್ಟು ಸಮಯ ಬೇಕು. ಈ ನಡುವೆ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಅನೇಕ ಆಫರ್‌ಗಳಿವೆ ಅವುಗಳಲ್ಲಿ ನಟಿಸುತ್ತಲೇ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ವಿವರ ನೀಡಿದ್ದಾರೆ ಪಿಗ್ಗಿ.
ಚೊಚ್ಚಲ ಭಾರಿಗೆ ಹಾಲಿವುಡ್ ಚಿತ್ರ “ಬೇವಾಚ್”ನಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದು, ಅದು ಬೇಸಿಗೆಯಲ್ಲಿ ಚಿತ್ರಮಂದಿರಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ. ಈ ನಡುವೆ ನಾಳೆ ನಡೆಯಲಿರುವ ೭೪ ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಣೆ ಮಾಡುವ ಜವಬ್ದಾರಿ ಪ್ರಿಯಾಂಕ ಚೋಪ್ರಾ ಹೆಗಲ ಮೇಲೆ ಬಿದ್ದಿದ್ದು ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಹಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗದ ಮಂದಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

Leave a Comment