ಪ್ರಾಣ ತೆಗೆದ ಬೈಕ್ ಸ್ಟ್ಯಾಂಡ್

ತೊಕ್ಕೊಟ್ಟು ಬಳಿ ನಡೆದ ಘಟನೆ   

ಗಾಂಜಾ ಪತ್ತೆ

 

ಮಂಗಳೂರು, ಅ.೧೨- ಸೈಡ್ ಸ್ಟ್ಯಾಂಡ್ ಹಾಕಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಬೈಕ್ ಸವಾರನೊಬ್ಬ ತಿರುವಿನಲ್ಲಿ ರಸ್ತೆಗೆಸೆಯಲ್ಪಟ್ಟು, ಆತನ ತಲೆಯ ಮೇಲೆ ಲಾರಿ ಚಕ್ರ ಹರಿದು ದಾರುಣ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ತೊಕ್ಕೊಟ್ಟು ಜಂಕ್ಷನ್ ಬಳಿ ನಡೆದಿದೆ. ಮೃತ ಯುವಕನನ್ನು ಬೆಳ್ತಂಗಡಿ ಮೂಲದವನೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

 

ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಬೈಕ್‌ನಲ್ಲಿ ಅಂದಾಜು ೨೫ ವರ್ಷ ಪ್ರಾಯದ ಯುವಕ ಬೈಕ್‌ನ ಸೈಡ್ ಸ್ಟ್ಯಾಂಡ್ ಹಾಕಿಕೊಂಡು ಸಂಚರಿಸುತ್ತಿದ್ದು, ಫ್ಲೈ ಓವರ್ ಸಮೀಪ ಬರುತ್ತಲೇ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಸ್ಟ್ಯಾಂಡ್ ರಸ್ತೆಗೆ ತಾಗಿ ಎಸೆಯಲ್ಪಟ್ಟಿದ್ದಾನೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲೋಡ್ ಲಾರಿ ಚಕ್ರ ಯುವಕನ ತಲೆಯ ಮೇಲೆ ಹರಿದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೆಲ್ಮೆಟ್ ತಲೆಯಲ್ಲಿದ್ದ ಸ್ಥಿತಿಯಲ್ಲೇ ತಲೆಯೊಡೆದು ಮುಖ ಗುರುತು ಸಿಗದಷ್ಟು ಛಿದ್ರವಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಆತನ ಬಳಿಯಿದ್ದ ವಾಹನದ ಆರ್.ಸಿ. ಬೆಳ್ತಂಗಡಿ-ಮಚ್ಚಿನ ಗ್ರಾಮದ ಕಲ್ಲಗುಡ್ಡೆ ನಿವಾಸಿ ತಸ್ಮಿಯಾ ಎಂಬವರ ಹೆಸರಲ್ಲಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಕಿಸೆಯಲ್ಲಿ ಎರಡು ಪ್ಯಾಕೆಟ್ ಗಾಂಜಾ!

ಮೃತ ಯುವಕನ ಕಿಸೆಯಲ್ಲಿ ೧೦೦ ಗ್ರಾಂ. ತೂಕದ ಎರಡು ಪ್ಯಾಕೆಟ್ ಗಾಂಜಾ ಪತ್ತೆಯಾಗಿದ್ದು ಈತ ಗಾಂಜಾ ದಂಧೆಯಲ್ಲಿ ತೊಡಗಿರುವವನೇ ಅಥವಾ ಗಾಂಜಾ ಸಾಗಾಟ ಮಾಡುತ್ತಿದ್ದನೇ ಎಂಬ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಗಾಂಜಾ ಅಮಲಿನಲ್ಲೇ ಅತೀವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೇ ಪ್ರಾಣಕ್ಕೆರವಾಗಿರಬೇಕೆಂದು ಶಂಕಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ದಂಧೆ ರಾಜಾರೋಷವಾಗಿ ಬೆಳೆಯುತ್ತಿದ್ದು ಅದೆಷ್ಟೋ ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಮುಂದಾಗದೇ ಇರುವುದೇ ಇಂಥ ಅನಾಹುತಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment