ಪ್ರಾಣ ಉಳಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು, ಡಿ.೫-ಜೀವದ ಹಂಗು ತೊರೆದು ಪ್ರಾಣ ಉಳಿಸಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದಲ್ಲಿಂದು ಕಬ್ಬನ್ ಪಾರ್ಕ್ ನ ಬಾಲ ಭವನ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ, ಮಕ್ಕಳ ದಿನಾಚರಣೆ ಅಂಗವಾಗಿ, _೮ ಕ್ಕೂ ಹೆಚ್ಚು ಶೌರ್ಯ ಸಹಿಸಿಗಳಿಗೆ ಹೊಯ್ಸಳ-ಕೆಳದಿ ಪ್ರಶಸ್ತಿ ಅನ್ನು ಸಚಿವೆ ಜಯಮಾಲ ಪ್ರದಾನ ಮಾಡಿದರು.

೧೦ ವರ್ಷದ ಸಾಹಸಿ: ಬೆಳಗಾವಿಯ ಗೋಕಾಕ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹತ್ತು ವರ್ಷದ ಶಿವಾನಂದ ಹೊಸಟ್ಟಿ, ಜೂನ್ ತಿಂಗಳಿನಲ್ಲಿ ಊರಿನ ಹಳ್ಳದಲ್ಲಿ ಮಳೆ ನೀರು  ಸಂಗ್ರಹವಾಗಿತ್ತು. ಇದರಲ್ಲಿ ಆಕಸ್ಮಿಕವಾಗಿ ಹುಡುಗನೊರ್ವ ಬಿದ್ದದ್ದು, ಅವನ ಆಕ್ರಂದನ,  ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿ ನೀರಿನ ರಭಸಕ್ಕೆ ಭಯಪಡದೆ, ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ಪ್ರಾಣಾಪಯದಿಂದ ರಕ್ಷಿಸಿದ.

ಅದೇ ರೀತಿ, ಉತ್ತರ ಕನ್ನಡ ಹೊನ್ನಾವರ ತಾಲೂಕಿನ ನವಿಲು ಗೋಣ, ಒಂಬತ್ತು ವರ್ಷದ ಆರ್ತಿ ಕಿರಣ್, ತನ್ನ ೨ ವರ್ಷದ ಸಹೋದರ ಆಟವಾಡುತ್ತಿದ್ದಾಗ ಏಕಾಏಕಿ ಹೋರಿಯೊಂದು, ದಾಳಿ ನಡೆಸಿತು. ಈ ಸಂದರ್ಭದಲ್ಲಿ ಆರ್ತಿ ತನ್ಮ ಪ್ರಾಣವನ್ನು ಮುಡಿಪಾಗಿಟ್ಟು, ರಕ್ಷಣೆ ಮಾಡಿದ್ದರು.

ಇನ್ನೂ, ಮೈಸೂರಿನ ದೇವನ್ಯ ರಸ್ತೆಯ ೧೩ ವರ್ಷದ  ಎಸ್.ಎನ್.ಮೌರ್ಯ,ಜುಲೈನಲ್ಲಿ ಸ್ನೇಹಿತನೊಂದಿಗೆ ಹಾರಂಗಿ ಜಲಾಶಯ ನೋಡಲು ಹೋಗಿದ್ದು, ತಿಂಡಿ ತಿಂದು ತಟ್ಟೆ ತೊಳೆಯಲು ನದಿಯ ಹತ್ತಿರ ಹೋದಾಗ ೬೦ ವಯಸ್ಸಿನ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದನ್ನು ಕಂಡು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಿಟ್ಟಡೆ ಗ್ರಾಮ ಸುಜಯ, ಜೂನ್ ತಿಂಗಳಿನಲ್ಲಿ ತಾನು ಮತ್ತು ತನ್ನ ಸ್ನೇಹಿತ ಇಬ್ಬರೂ ಶಾಲೆಯಿಂದ ಮನೆಗೆ ಹೋಗುತ್ತಿರುವಾಗ ೨೦ ಅಡಿ ಆಳವಿರುವ ತೋಡನ್ನು ದಾಟಲು ಅಳವಡಿಸಲಾಗಿದ್ದ ಅಡಿಕೆ ಮರದ ಸೇತುವೆಯಿಂದ ಕಾಲು ಜಾರಿ ಬೀಳುವ ಸಮಯದಲ್ಲಿ ತನ್ನ ಸ್ನೇಹಿತನ ಕಾಲನ್ನು ಹಿಡಿದು ನೀರಿಗೆ ಬೀಳದಂತೆ ಹಿಡಿದುಕೊಂಡು ಕಾಪಾಡಿ ಸಾಹಸ ಮಾಡಿದ್ದರು.

ಮಕ್ಕಳ ಕಲ್ಯಾಣ ಪ್ರಶಸ್ತಿಗಳು

ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

೨೦೧೮ನೇ ಸಾಲಿನಲ್ಲಿ ೪ ಸಂಸ್ಥೆಗಳು ಹಾಗೂ ೪ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು .೧ ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ವೈಯಕ್ತಿಕ ಪ್ರಶಸ್ತಿ ೨೫ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಲಾಯಿತು.

ನಗದು ಪ್ರದಾನ

ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ಕಾಪಾಡಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಜೊತೆಗೆ, ತಲಾ ೧೦ ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆಯನ್ನು ನೀಡಲಾಯಿತು.

Leave a Comment