ಪ್ರಾಣಿ ಪಕ್ಷಿ ಸಂರಕ್ಷಣೆಗೆ ಮನವಿ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಆ. ೯- ದೇಶದ ಖ್ಯಾತ ಮೂಳೆ ತಜ್ಞರಲ್ಲಿ ಒಬ್ಬರಾದ ಡಾ. ವೆಂಕಟೇಶ್ ನೇತನ್ ಅವರು ವನ್ಯಜೀವಿ ಗ್ರಾಹಕರಾಗಿಯೂ ಹೆಸರಾಗಿದ್ದು, ಅವರ ಛಾಯಾಚಿತ್ರ ಪ್ರದರ್ಶನ ನಗರದ ಚಿತ್ರಕಲಾ ಪರಿಷತ್‌ನಲ್ಲಿಂದು ಆಯೋಜನೆಗೊಂಡಿದೆ.

“ಪ್ರಕೃತಿ ನಡುವೆ ಸಂಪರ್ಕ” ಈ ವಿಷಯವನ್ನು ಇಟ್ಟುಕೊಂಡು ಡಾ. ವೆಂಕಟೇಶ್ ನೇತನ್ ಅವರು ತಾವು ತೆಗೆದಿರುವ ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಗಳ ಏಕವ್ಯಕ್ತಿ ಪ್ರದರ್ಶನವನ್ನು ಇಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು.

ಈ ಛಾಯಾಚಿತ್ರ ಪ್ರದರ್ಶನ ಇಂದಿನಿಂದ ಈ ತಿಂಗಳ  12ರವರೆಗೂ ನಡೆಯಲಿದ್ದು ಬೆಳಗ್ಗೆ 11 ರಿಂದ ಸಂಜೆ 6 ರವರೆಗೂ ಛಾಯಾಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

9j19-small

ಈ ಉದ್ಘಾಟನಾ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ರೂಪಾ, ರಾಜೀವಾ‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಕೆ.ಎಸ್. ರವೀಂದ್ರನಾಥ್ ಮತ್ತಿತರರು ಇದ್ದರು.

ಈ ಛಾಯಾಚಿತ್ರ ಪ್ರದರ್ಶನದ ಮೂಲ ಉದ್ದೇಶ ಪ್ರಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಪ್ರಾಣಿ ಪಕ್ಷಿಗಳ ಬಗ್ಗೆ ಆಸಕ್ತಿ ಬೆಳೆಸುವುದು, ಭೂಮಿ ಮತ್ತು ಪ್ರಕೃತಿಯೊಂದಿಗೆ ಸಂಬಂಧ ಹೊಂದಲು ನಾಗರಿಕರನ್ನು ಸಂಮೋದನೆಗೊಳಿಸುವುದೇ ಆಗಿದೆ ಎಂದು ಡಾ. ವೆಂಕಟೇಶ್ ನೇತನ್ ತಿಳಿಸಿದರು.

ಕೆಲ ವರ್ಷಗಳಲ್ಲಿ ನಮ್ಮ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಸಾಕಷ್ಟು ಬದಲಾವಣೆ ನೋಡುತ್ತಿದ್ದು, ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಹಲವು ಮಾನವ ನಿರ್ಮಿತವಾಗಿದೆ. ಅರಣ್ಯ ಮತ್ತು ನದಿಗಳ ಮೇಲೆ ಆಕ್ರಮಣ ನಡೆದಿದೆ. ಮರ ಕತ್ತರಿಸುವುದು, ಪ್ರಾಣಿ-ಪಕ್ಷಿಗಳ ಮೇಲೆ ಆಕ್ರಮಣ ಇವೆಲ್ಲಾ ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನಕ್ಕೆ ಕಾರಣವಾಗಿದೆ. ಹಾಗಾಗಿ ಪ್ರಕೃತಿಯನ್ನು ರಕ್ಷಿಸಿ ಉಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ. ಸರ್ಕಾರದ ಜತೆ ಸರ್ಕಾರೇತರ ಸಂಘಟನೆಗಳು ಕೈಜೋಡಿಸಿ, ಪ್ರಕೃತಿ, ಪ್ರಾಣಿ ಪಕ್ಷಿಗಳನ್ನು ಉಳಿಸಿ ಸುಂದರ ಪರಿಸರ ನಿರ್ಮಾಣಕ್ಕೆ ಕಾರಣವಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

Leave a Comment