ಪ್ರಾಣಕ್ಕೆರವಾದ ವಿದ್ಯುತ್ ತಂತಿ ತೋಟದಲ್ಲಿ ತಂದೆ-ಮಗಳ ದಾರುಣ ಅಂತ್ಯ

ಮಂಗಳೂರು, ಜೂ. ೧೨- ತಮ್ಮದೇ ತೋಟದಲ್ಲಿ ಹುಲ್ಲು ಕತ್ತರಿಸಲು ಹೋಗಿದ್ದ ತಂದೆ ಮಗಳು ಗಾಳಿ-ಮಳೆಯ ಸಂದರ್ಭ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಾರುಣ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಪಿಲಿಮೊಗ್ರು ಗ್ರಾಮದ ಬಾರೆಕ್ಕಿನಡಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಮೃತರನ್ನು ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಶೆಟ್ಟಿ(೬೫) ಮತ್ತವರ ಮಗಳು ದಿವ್ಯಶ್ರಿ(೨೯) ಎಂದು ಹೆಸರಿಸಲಾಗಿದೆ.
ಘಟನೆಯ ವಿವರ:
ನಿನ್ನೆ ಸಂಜೆ ಗೋಪಾಲಕೃಷ್ಣ ಶೆಟ್ಟಿ ತಮ್ಮ ಮಗಳ ಜೊತೆ ದನಗಳಿಗೆ ಹಾಕಲು ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಈ ವೇಳೆ ಜೋರಾಗಿ ಗಾಳಿ-ಮಳೆ ಬಂದಿದೆ. ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಇದನ್ನು ಗಮನಿಸದೆ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಪುತ್ರಿ ದಿವ್ಯಶ್ರೀ ರಕ್ಷಣೆಗಾಗಿ ಧಾವಿಸಿದ್ದು ಅಷ್ಟರಲ್ಲಿ ಆಕೆಯೂ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಸಂಜೆ ಸುಮಾರು ೪ ಗಂಟೆಯ ವೇಳೆ ಘಟನೆ ಸಂಭವಿಸಿದೆ. ಗಾಳಿಗೆ ಅಡಿಕೆ ಮರದ ಸೋಗೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಅದು ತುಂಡಾಗಿ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗೋಪಾಲಕೃಷ್ಣ ಶೆಟ್ಟಿ ಅವರು ಪತ್ನಿ ಗಿರಿಜಾ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪತಿ ಮತ್ತು ಪುತ್ರಿಯ ಸಾವಿನ ಸುದ್ದಿಗೆ ಪತ್ನಿ ಗಿರಿಜಾ ಶೆಟ್ಟಿ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ಇವರನ್ನು ಮಗ ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ಕೆಲಸದಲ್ಲಿದ್ದು, ಮತ್ತೊರ್ವ ಮಗ ತಂದೆಯ ಕೃಷಿ ಕಾರ್ಯದಲ್ಲಿ ಸಹಕರಿಸುತ್ತಿದ್ದ.
ಮೆಸ್ಕಾ ನಿರ್ಲಕ್ಷ್ಯ: ಪ್ರತಿಭಟನೆ
ಘಟನೆ ನಡೆಯಲು ಮೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮೆಸ್ಕಾಂನ ಹಿರಿಯ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಜನರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹಳೆಯ ತಂತಿಗಳನ್ನು ಮೆಸ್ಕಾಂ ಇಲಾಖೆ ಬದಲಿಸದೆ ಇರುವುದು ಘಟನಗೆ ಮೂಲ ಕಾರಣವೆಂದು ಆರೋಪಿಸಿದ್ದಾರೆ. ಮೃತ ದಿವ್ಯಶ್ರೀ ವಿಕಲಚೇತನರಾಗಿದ್ದು ಅವಿವಾಹಿತೆಯಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Leave a Comment