ಪ್ರಸನ್ನಗೆ ಹೇರೂರ ದತ್ತಾತ್ರೇಯ ರಂಗಪ್ರಶಸ್ತಿ ಪ್ರದಾನ

ಹೊಸ ಆಯಾಮ ಕಂಡುಕೊಂಡರೆ ಮಾತ್ರ ರಂಗಭೂಮಿಗೆ ಉಳಿಗಾಲ

ಕಲಬುರಗಿ,ಏ.16-“ಯಂತ್ರಚಾಲಿತ ಮನೋರಂಜನೆಯ ಪ್ರಭಾವ ಗಾಢವಾಗಿರುವ ಈ ಕಾಲದಲ್ಲಿ ಮನೋರಂಜನೆಗಾಗಿ ನಾಟಕ ಮಾಡುತ್ತೇವೆ ಅನ್ನುವುದು ದುಸ್ಸಾಹಸವೇ ಸರಿ. ಹೊಸ ಆಯಾಮ ಕಂಡುಕೊಳ್ಳುವ ನಿಟ್ಟಿನಲ್ಲಿ ರಂಗಭೂಮಿ ಇಂದು ಗಂಭೀರವಾದ ಚಿಂತನೆ ನಡೆಸುವ ಅಗತ್ಯವಿದ್ದು, ಹೊಸ ಆಯಾಮ ಕಂಡುಕೊಳ್ಳದೇ ಇದ್ದರೆ ರಂಗಭೂಮಿ ಉಳಿಯಲು ಸಾಧ್ಯವಿಲ್ಲ” ಎಂದು ಖ್ಯಾತ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.

ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆ ನಗರದ ಸಂಗಮೇಶ್ವರ ಸಭಾಗೃಹದಲ್ಲಿಂದು ಹಮ್ಮಿಕೊಂಡಿದ್ದ 2008ನೇ ಸಾಲಿನ ಹೇರೂರ ದತ್ತಾತ್ರೇಯ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಯಂತ್ರನಾಗರೀಕತೆ ಸಂಪೂರ್ಣವಾಗಿ ಆವರಿಸಿಕೊಂಡಿರುವ ಕಾಲದಲ್ಲಿಂದು ನಾವು ನಿಂತಿದ್ದು, ಯಂತ್ರನಾಗರೀಕತೆ ಮತ್ತು ಮಾರುಕಟ್ಟೆಯ ಧಾವಂತದಿಂದಾಗಿ ಸಭ್ಯತೆ, ಕನ್ನಡ ಭಾಷೆ ಮತ್ತು ಗ್ರಾಮೀಣ ಸಂಸ್ಕೃತಿ ಉಳಿಸಿ ಬೆಳೆಸುವುದು ಬಹುದೊಡ್ಡ ಸವಾಲಾಗಿದೆ ಎಂದರು.

ರಂಗಭೂಮಿ ಇಂದು ಕೈ ಉತ್ಪನ್ನ, ಗ್ರಾಮೀಣ ಸಂಸ್ಕೃತಿಯ ಪರವಾಗಿ ಮತ್ತು ಶಿಕ್ಷಣ, ಸ್ವಾಸ್ಥ್ಯ, ನಾಯಕತ್ವ, ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗಿದೆ. ಯಂತ್ರ ಸಂಸ್ಕೃತಿಯಿಂದಾಗಿ ಗ್ರಾಮೀಣ ಸಂಸ್ಕೃತಿ ಎಷ್ಟು ಪ್ರಮಾಣದ ದಬ್ಬಾಳಿಕೆ ಎದುರಿಸುತ್ತಿದೆಯೋ, ಅಷ್ಟೇ ಪ್ರಮಾಣದ ದಬ್ಬಾಳಿಕೆಯನ್ನು ಕೈ ಉತ್ಪನ್ನ ಸಂಸ್ಕೃತಿಯೂ ಎದುರಿಸುತ್ತಿದೆ. ಜನರ ಜೀವನ ಶೈಲಿಯಾಗಿ ಗ್ರಾಮೀಣ ಸಂಸ್ಕೃತಿ ಉಳಿದರೆ ಮಾತ್ರ ಕೈ ಉತ್ಪನ್ನ ಸಂಸ್ಕೃತಿ ಉಳಿಯಲು ಸಾಧ್ಯವಿದೆ ಎಂದರು.

ವಿಶ್ವದಲ್ಲಿ ಶೇ.60 ಜನ ಇಂದಿಗೂ ಕೈ ಉತ್ಪನ್ನ ಬಳಸಿಕೊಂಡೇ ಬದುಕುತ್ತಿದ್ದಾರೆ. ಹೈದ್ರಾಬಾದ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಪ್ರತಿ ಸಂತೆಯಲ್ಲಿಯೂ ಇಂದಿಗೂ ಕೈ ಉತ್ಪನ್ನಗಳ ಮಾರಾಟವೇ ನಡೆಯುತ್ತದೆ ಎಂದು ಹೇಳಿದರು.

ನಾನು ಗಾಂಧಿವಾದಿ ಹೌದು ಅಲ್ಲವೋ ಗೊತ್ತಿಲ್ಲ. ನಾನೊಬ್ಬ ರಂಗಕರ್ಮಿ. ವಿಚಾರಗಳಿಗಿಂತ ಆಚಾರಕ್ಕೆ ಹೆಚ್ಚಿನ ಒತ್ತು ಕೊಡಲು ರಂಗಭೂಮಿ ಕಾರಣವಾಗಿದೆ ಎಂದರು.

ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಿ.ಸರ್ವೋತ್ತಮರಾವ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ.ಗೌತಮ ಜಹಾಗೀರದಾರ, ಖಜಾಂಚಿ ಶ್ರೀಕಾಂತ ಕುಲಕರ್ಣಿ, ಹೇರೂರ ದತ್ತಾತ್ರೇಯ ರಂಗಪ್ರಶಸ್ತಿ ಸಮಿತಿ ಸಂಚಾಲಕ, ರಂಗಕರ್ಮಿ ಪ್ರಭಾಕರ ಸಾತಖೇಡ, ದತ್ತಾತ್ರೇಯ ಹೇರೂರ ಅವರ ಪುತ್ರ ಡಾ.ಸುರೇಶ ಹೇರೂರ ವೇದಿಕೆ ಮೇಲಿದ್ದರು.

ಜಾನಕಿ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು, ರಂಗಾಸಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Comment