ಪ್ರಶಾಂತ ಕೊಟಗಿ ಕೊಲೆ : ಇಬ್ಬರು ಆರೋಪಿಗಳ ಬಂಧನ

ಕಲಬುರಗಿ,ಸೆ.23-ನಗರ ಹೊರವಲಯದ ಶರಣಸಿರಸಗಿಯ ಖರ್ಗೆ ಕಾಲೋನಿಯಲ್ಲಿ ಈಚೆಗೆ ನಡೆದ ಪ್ರಶಾಂತ ಕೊಟಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿದ್ದಾಪುರ ಕಾಲೋನಿಯ ವಿನೋದ ತಂದೆ ಧರ್ಮಣ್ಣಾ ಚವ್ಹಾಣ ಮತ್ತು ಮಹೇಶ ತಂದೆ ಕಾಶಿನಾಥ ಪರೀಟ್ ಅಲಿಯಾಸ್ ದೋಬಿ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮದ್ಯ ಸೇವಿಸಲು ಸಾಲದ ರೂಪದಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ ಪ್ರಶಾಂತ ಕೊಟಗಿಯನ್ನು ಆತನ ಮನೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಈ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಡಿಸಿಪಿ ಡಿ.ಕಿಶೋರಬಾಬು, ಸಿ ಉಪ ವಿಭಾಗದ ಎಸಿಪಿ ಎಸ್.ಹೆಚ್.ಸುಬೇದಾರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಲಿಂಗ ಕಿರದಳ್ಳಿ ನೇತೃತ್ವದಲ್ಲಿ ಪಿಎಸ್ಐ ಎಸ್.ಎಸ್.ದೊಡ್ಡಿಮನಿ, ಸಿಬ್ಬಂದಿಗಳಾದ ಹುಸೇನಬಾಷಾ, ಶಿವಶರಣಪ್ಪ, ಶರಣಗೌಡ, ಕುಶಣ್ಣಾ, ಕೇಶುರಾಯ, ರಾಜಕುಮಾರ, ಅಂಬಾಜಿ ಮತ್ತು ಪ್ರಕಾಶ ಅವರು ತನಿಖೆ ನಡೆಸಿ ಅವರಾದ (ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಚ್ಚು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆ ನಡೆದ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಡಿಸಿಪಿ ಡಿ.ಕಿಶೋರಬಾಬು ಮತ್ತು ಎಸಿಪಿ ಎಸ್.ಹೆಚ್.ಸುಬೇದಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment