ಪ್ರಶಸ್ತಿ ಚಿತ್ರ ಮೂಡಲ ಸೀಮೆಯಲ್ಲಿ ಜನರ ಮುಂದೆ…

ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ ರಾಜ್ಯ ಪ್ರಶಸ್ತಿ ದೊರೆತಿರುವ ‘ಮೂಡಲ ಸೀಮೆಯಲಿ’ ಚಿತ್ರ ಅತ್ಯಲ್ಪ ಅಂತರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯಿಂದ ವಂಚಿತವಾಗಿತ್ತು. ಆಗ ನಿರಾಸೆಯಾದರೂ ರಾಜ್ಯ ಪ್ರಶಸ್ತಿ ಸಿಕ್ಕಿರುವ ತೃಪ್ತಿಯಲ್ಲಿದ್ದಾರೆ ಚಿತ್ರದ ನಿರ್ಮಾಪಕ ಮತ್ತು ಸಂಕಲನಕಾರರಾಗಿರುವ ಅನಿಲ್ ನಾಯ್ಡು.

ಪ್ರಶಸ್ತಿ ಅವರಿಗೆ ಹೊಸದೇನು ಅಲ್ಲ ‘ಮುಸ್ಸಂಜೆ’ ಚಿತ್ರದ ಸಂಕಲನಕ್ಕೆ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಜೊತೆಗೆ ಈ ಮೊದಲು ಗೆಳೆಯರೊಂದಿಗೆ ಸೇರಿ ಸಿಂಡಿಕೇಟ್ ಮಾಡಿಕೊಂಡು ನಿರ್ಮಿಸಿದ್ದ ‘ಕಾಡಬೆಳದಿಂಗಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು.

ಈಗ ಅವರು ತಮ್ಮ ಸಹೋದರಿಯರಾದ ಅಮರಾವತಿ ಮತ್ತು ಅರುಂಧತಿ ಅವರೊಂದಿಗೆ  ನಿರ್ಮಾಣ ಮಾಡಿರುವ ಮೂಡಲ ಸೀಮೆಯಲ್ಲಿ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಇದಕ್ಕೆ ಮುನ್ನ ತಮ್ಮ ವಿದಾತ ಇನ್‌ಫೊ ಮಿಡಿಯಾ ಬ್ಯಾನರ್‌ನಲ್ಲಿ ‘ಅಘೋರ’ ಚಿತ್ರ ನಿರ್ಮಿಸಿದ್ದರು.

ವಯಸ್ಸಿಗೆ ಬಂದಿರುವ ಮಗಳನ್ನು ಯಾರು ಅತ್ಯಧಿಕ ಬೆಲೆ ನೀಡುತ್ತಾರೊ ಅವರಿಗೆ ಮಾರಾಟ ಮಾಡುವ ಮತ್ತು ಅಂತಹ ಮಗಳಿರುವ ಮಗ ಮರಣಹೊಂದಿದ ಪಕ್ಷದಲ್ಲಿ ಮಾವನಾದವನಿಗೆ ಸೊಸೆ ಮತ್ತು ಮೊಮ್ಮಗಳನ್ನು ಮಾರಾಟ ಮಾಡುವ ಹಕ್ಕು ವರ್ಗಾವಣೆಯಾಗುವ ಪದ್ಧತಿ  ಕೊರಚ ಜನಾಂಗದಲ್ಲಿತ್ತು. ಹಿಂದೆ ನಡೆದಿದ್ದ ನೈಜ ಘಟನೆಯನ್ನು ಆಧರಿಸಿಯೇ ಈಶ್ವರಚಂದ್ರ ಅವರು ಬರೆದಿರುವ ಕಾದಂಬರಿಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ.

ಇಂತಹ ಶೋಷಣೆಗೆ ಒಳಪಡುವ ಹೆಣ್ಣೊಬ್ಬಳು ತನ್ನನ್ನು ಮತ್ತು ತನ್ನ ಮಗಳನ್ನು ರಕ್ಷಿಸಿಕೊಳ್ಳಲು ಜನಾಂಗದ ಪದ್ಧತಿಯನ್ನೇ ಪ್ರತಿಭಟಿಸಿ ನಿಲ್ಲುತ್ತಾಳೆ. ಇದಕ್ಕೆ ಇಡೀ ಊರಿನ ಮಹಿಳೆಯರು ಅವಳಿಗೆ ಬೆಂಗಾವಲಾಗಿ ನಿಲ್ಲುತ್ತಾರೆ.

ಮಹಿಳಾ ಪ್ರಧಾನವಾದ  ಕಥಾವಸ್ತು ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಇರುವುದರಿಂದ ಅನಿಲ್ ನಾಯ್ಡು ಅವರು ಚಿತ್ರ ನಿರ್ಮಿಸಲು ಮನಸ್ಸು ಮಾಡಿದ್ದಕ್ಕೆ ಈಗ ಪ್ರಶಸ್ತಿಯ ಪ್ರತಿಫಲ ಸಿಕ್ಕಿದೆ.  ಶೋಷಣೆಗೆ ಒಳಗಾಗುವ ಮತ್ತು  ಮಗಳನ್ನು ರಕ್ಷಿಸಿಕೊಳ್ಳುವ ಹೆಣ್ಣಾಗಿ ಸುಧಾರಾಣಿ ಮತ್ತು ಮಾವನಾಗಿ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ. ಅನಿಲ್ ನಾಯ್ಡು ಅವರು  ಚಿತ್ರವನ್ನು  ಜನರಿಗೆ ತಲುಪಿಸಲು ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

Leave a Comment