‘ಪ್ರವಾಹ’ ನೃತ್ಯ ಉತ್ಸವ

ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡಾನ್ಸ್ ಸಂಸ್ಥೆಯು ಏಳನೇ ಆವೃತ್ತಿಯ ನೃತ್ಯ ಉತ್ಸವ ‘ಪ್ರವಾಹ’ ಅನ್ನು ಸೆಪ್ಟೆಂಬರ್ ೬ ಮತ್ತು ೭ರಂದು ಎರಡು ದಿನಗಳ ಕಾಲ ಆಯೋಜಿಸಿದೆ. ಒಡಿಸ್ಸಿ ನೃತ್ಯ ಕ್ಷೇತ್ರದ ದಂತ ಕತೆ ಎನಿಸಿಕೊಂಡಿರುವ ಗುರು ಕೇಲುಚರಣ್ ಮೊಹಪಾತ್ರ ಅವರನ್ನು ಸ್ಮರಿಸುವ ಉದ್ದೇಶದಿಂದ ಈ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಮಲ್ಲೇಶ್ವರದ ಸೇವಾಸದನದಲ್ಲಿ ಎರಡು ದಿನ ಸಂಜೆ ೬.೩೦ರಿಂದ ಕಾರ್ಯಕ್ರಮ ನಡೆಯಲಿದೆ.

‘ಪ್ರವಾಹ’ ನೃತ್ಯ ಕಾರ್ಯಕ್ರಮವು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ವಿಭಿನ್ನ ಒಡಿಸ್ಸಿ ನೃತ್ಯ ಕಾರ್ಯಕ್ರಮವಾಗಿದ್ದು, ಭಾರತದ ಹೆಸರುವಾಸಿ ನೃತ್ಯಪಟು, ಗುರು ಕೇಲಚರಣ್ ಮೊಹಪಾತ್ರ ಅವರು ನೃತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಈ ಮೂಲಕ ಸ್ಮರಿಸಲಾಗುತ್ತದೆ. ಪ್ರಸ್ತುತ ವರ್ಷದ “ಪ್ರವಾಹ’ ನೃತ್ಯ ಉತ್ಸವದಲ್ಲಿ ದೇಶದ ಹೆಸರುವಾಸಿ ಒಡಿಸಿ ನೃತ್ಯಪಟುಗಳು ಪ್ರದರ್ಶನ ನೀಡಲಿದ್ದಾರೆ.

ಅದೇ ರೀತಿ ಈ ವರ್ಷದ ನೃತ್ಯ ಉತ್ಸವದಲ್ಲಿ ಭರತನಾಟ್ಯ ಹಾಗೂ ಕಥಕ್ ಶೈಲಿಯ ಹೊಸ ಆವಿಷ್ಕಾರದ ಕೊರಿಯೊಗ್ರಫಿಯೂ ಪ್ರದರ್ಶನವಾಗಲಿದೆ. ಪ್ರವಾಹ ನೃತ್ಯ ಉತ್ಸವವು ಖ್ಯಾತ ಒಡಿಸ್ಸಿ ಕಲಾವಿದೆ, ಮುಂಬಯಿಯ ಜೇಲುಮ್ ಪರಾಂಜಪೆ ಅವರ ಶಿಷ್ಯೆ ರುಪಾಲಿ ಕದಮ್ ಅವರಿಂದ ಆರಂಭಗೊಳ್ಳಲಿದೆ. ಇವರ ಬಳಿಕ ಮಧುಲಿತಾ ಮೊಹಪಾತ್ರ ಹಾಗೂ ಅವರ ಶಿಷ್ಯೆ ಪರಿಧಿ ಜೋಶಿ ಅವರ ನೃತ್ಯ ನಡೆಯಲಿದೆ. ಇದಾದ ಬಳಿಕ ದೇಬಶಿಶ್ ಪಟ್ನಾಯಕ್ ಹಾಗೂ ಲೀನಾ ಮೊಹಾಂತಿ ಜೋಡಿಯಿಂದ ಪ್ರದರ್ಶನ ನಡೆಯಲಿದೆ.

ಎರಡನೇ ದಿನದ ಕಾರ್ಯಕ್ರಮದಲ್ಲಿ ಶರ್ಮಿಳಾ ಮುಖರ್ಜಿ ಹಾಗೂ ಅವರ ಸಂಜಲಿ ತಂಡ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದರಲ್ಲಿ ದೇವಿ ಲಕ್ಷಿಯ ಪೂಜಾ ಪ್ರಕಾರ ಪ್ರದರ್ಶನಗೊಳ್ಳಲಿದೆ.

ಒಡಿಸ್ಸಿ ನೃತ್ಯದ ಮೂಲಕ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿರುವ ಶರ್ಮಿಳಾ ಮುಖರ್ಜಿ ಹಾಗೂ ಅವರ ಸಂಜಲಿ ನೃತ್ಯ ತಂಡವು ‘ವಿಸಾರಿಣಿ’ ಎನ್ನುವ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ವಿಸಾರಿಣಿಯು ಒಡಿಸ್ಸಿ ನೃತ್ಯ ಪ್ರಕಾರದ ಸಮಗ್ರ ವಿಷಯಗಳನ್ನು ಒಳಗೊಂಡಿರುವ ಅದ್ಭುತ ಪ್ರದರ್ಶನವಾಗಿದ್ದು, ಒಡಿಸ್ಸಿಯನ್ನು ಮರು ನಿರ್ಮಾಣ ಮಾಡುವ ಕಾರ್ಯವನ್ನು ಇದರ ಮೂಲಕ ಮಾಡಲಾಗಿದೆ.  ಮಾಹಿತಿಗಾಗಿ ೭೭೯೫೦ ೯೦೩೩೮ ಸಂಪರ್ಕಿಸಬಹುದು.

Leave a Comment