ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಸಂತ್ರಸ್ತರು

ಹುಬ್ಬಳ್ಳಿ, ಸೆ ೧೨- ಪ್ರಕೃತಿಯ ಮುಂದೆ ಯಾರ ಆಟವೂ ನಡೆಯುವುದಿಲ್ಲ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ತೋರಿಸಿಕೊಟ್ಟಿದೆ. ಸುಮಾರು ದಿನಗಳಿಂದ ಅಬ್ಬರಿಸಿದ ವರುಣ ದೇವ ರಾಜ್ಯದ ಉತ್ತರ ಕರ್ನಾಟಕದಲ್ಲಿ ಜನರ ಜೀವನವನ್ನೇ ಕಸಿದುಕೊಂಡಿದ್ದು, ಪ್ರವಾಹದಿಂದಾಗಿ ಬೀದಿಗೆ ಬಂದ ಜನತೆಗೆ ಈಗ ಭವಿಷ್ಯದ ಭೂತ ಕಾಡತೊಡಗಿದೆ.
ಪ್ರವಾಹದಿಂದಾಗಿ ರಾಜ್ಯದ ಉತ್ತರ ಕರ್ನಾಟಕದಲ್ಲಿ ಅಪಾರ ಪ್ರವಾಣದ ಹಾನಿ ಸಂಭವಿಸಿದ್ದು, ಜನ ಮನೆಮಠಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಒಂದು ಕಡೆ ಸೂರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಇನ್ನೊಂದೆಡೆ ಹೊಲಗಳು ಹೊಂಡಗಳಾಗಿ ಮಾರ್ಪಟ್ಟಿವೆ. ಜನ ಜಾನುವಾರು ಸೇರಿದಂತೆ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.
ಭೀಕರ ಮಳೆಗೆ ಸರ್ವಸ್ವವನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಈಗ ತಮ್ಮ ಭವಿಷ್ಯದ ಬಗ್ಗೆಯೇ ಚಿಂತೆ. ಪ್ರಾಣಗಳನ್ನು ಕಳೆದುಕೊಂಡಿರುವ ಕುಟುಂಬಗಳ ಜನರಿಗೆ ತಮ್ಮವರನ್ನು ಕಳೆದುಕೊಂಡೆವಲ್ಲ ಎಂಬ ಚಿಂತೆ ಒಂದೆಡೆಯಾದರೆ, ಮನೆಮಠ ಕಳೆದುಕೊಂಡವರಿಗೆ ಅವನ್ನು ಮತ್ತೆ ಹೇಗೆ ಪಡೆಯಬೇಕು, ಮತ್ತೆ ಭವಿಷ್ಯ ಹೇಗೆ ರೂಪಿಸಿಕೊಳ್ಳಬೇಕು? ಎಂಬ ಚಿಂತೆ ಕಾಡತೊಡಗಿದೆ.
ಸದ್ಯ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿರುವ ಸಂತ್ರಸ್ತರ ಹೊಟ್ಟೆಗೆ ಸರ್ಕಾರ ಅಷ್ಟೋ ಇಷ್ಟೋ ಹಿಟ್ಟು ಹಾಕುತ್ತಿದೆಯಾದರೂ, ತುತ್ತು ಬಾಯಿಗೆ ಹಾಕುತ್ತಿರವಾಗ ಅವರ ಕಣ್ಣು ಮುಂದೆ ಭವಿಷ್ಯದ ಕತ್ತಲೆಯ ಛಾಯೆ ಮಾತ್ರ ಆವರಿಸಿರುವುದು ಅವರ ಮುಖದಲ್ಲಿ ಗೋಚರವಾಗುತ್ತಿದೆ.
ಒಂದು ಕಡೆ ಜನಪ್ರತಿನಿಧಿಗಳು ಸಂತ್ರಸ್ತರನ್ನು ಭೇಟಿಯಾಗಿ ಆಶ್ವಾಸನೆಗಳನ್ನು ಕೊಟ್ಟು ಹೋಗುತ್ತಿದ್ದರೂ, ನಂತರ ಇತ್ತ ಇಣುಕಿ ಸಹ ನೋಡುತ್ತಿಲ್ಲ. ತಾತ್ಕಾಲಿಕವಾಗಿ 10-20 ಸಾವಿರ ಪರಿಹಾರ ಕಲ್ಪಿಸಲಾಗುತ್ತಿದೆಯಾದರೂ ಅದು ಯಾವುದಕ್ಕೂ ಸಾಕಾಗುತ್ತಿಲ್ಲ.
ಈಗಾಗಲೇ ಕೆಲ ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರಾರ್ಥವಾಗಿ ಚೆಕ್‍ಗಳನ್ನು ವಿತರಿಸಲಾಗುತ್ತಿದೆಯಾದರೂ ಇನ್ನೂ ಎಷ್ಟೋ ಜನರಿಗೆ ಅವು ತಲುಪಿಲ್ಲವೆಂಬ ದೂರುಗಳು ಕೇಳಿಬಂದಿವೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿ ವರ್ಗ ಜಾಗೃತೆ ವಹಿಸಲಿ. ಕೇವಲ ಪ್ರಾರಂಭದಲ್ಲಿ ಮಾತ್ರ ಮುಂಜಾಗೃತೆವಹಿಸಿ ನಂತರ ಕ್ಯಾರೆ ಎನ್ನದ ಆಡಳಿತ ವ್ಯವಸ್ಥೆ ತಾಂಡವವಾಡುತ್ತಿದ್ದು, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಕೆಲ ಪ್ರದೇಶಗಳಲ್ಲಿ ಪರಿಹಾರ ಸಿಗುತ್ತಿಲ್ಲವೆಂದು ಸಂತ್ರಸ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲ ಕಡೆಗಳಲ್ಲಿ ಸಂತ್ರಸ್ತರನ್ನು ಬಿಟ್ಟು ಸಂತ್ರಸ್ತರಲ್ಲದವರಿಗೆ ಪರಿಹಾರ ನೀಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಇದನ್ನು ಸಂಬಂಧ ಪಟ್ಟ ಸ್ಥಳಿಯ ಆಡಳಿತ ಗಂಭೀರವಾಗಿ ಪರಿಗಣಿಸಿ ದುರವಸ್ತೆಯನ್ನು ಸರಿಪಡಿಸಬೇಕಾಗಿದೆ.

Leave a Comment