ಪ್ರಮುಖ ಆರೋಪಿ ಸೇರಿ ಸುಪಾರಿ ಕೊಲೆಗಾರರ ಬಂಧನ

ಬೆಂಗಳೂರು, ಫೆ 20 – ಸುಪಾರಿ ನೀಡಿದ ಆರೋಪಿ ಸೇರಿದಂತೆ 9 ಜನ ಕೊಲೆಗಡುಕರನ್ನು ಮಹಾದೇವ ಪುರ‌ ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸತ್ಯ (41), ಪ್ರಶಾಂತ್  ಜಿ  (20), ಪ್ರೇಮ್ (31),  ದಿನೇಶ್ (26),  ಲೋಕೇಶ್ (28), ಕುಶಾಂತ್ (30), ಸಂತೋಷ್ (25), ರವಿ (37), ಸಯಿದಾ (25) ಬಂಧಿತ ಆರೋಪಿಗಳು.

ಇದೇ ತಿಂಗಳ 3 ರಂದು ತಮ್ಮ ಸಹೋದರ ಟೆಕ್ಕಿ ಲಕ್ಷ್ಮಣ್ ಕುಮಾರ್ (33) ಅವರ ಮೇಲೆ  ಪ್ರಶಾಂತ್ ಇತರರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮೃತರ ಸಹೋದರ  ರಾಜಕೇಖರ್ ಕೆ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸುಪಾರಿ ನೀಡಿದ್ದ ಹೈದರಾಬಾದ್ ಮೂಲದ ಸತ್ಯ  ಎಂಬುವವರು ಮೃತ ಲಕ್ಷ್ಮಣ್ ಅವರ ಪತ್ನಿ ಶ್ರೀಜಾಳ ಅಕ್ಕನ ಗಂಡನಾಗಿದ್ದು, ಶ್ರೀಜಾಳ ಮದುವೆಗೆ ಮುಂಚೆಯೇ ಏಕಮುಖವಾಗಿ ಪ್ರೀತಿಸುತ್ತಿದ್ದನು. ಆಕೆಯ ಗಂಡ ಲಕ್ಷ್ಮಣ್ ನನ್ನು ಕೊಲೆ ಮಾಡಿದರೇ, ಸಹೋದರರಿಲ್ಲದ ಶ್ರೀಜಾ, ನಂತರ ತನ್ನ ಮನೆಗೆ ಬಂದು ವಾಸವಾಗುತ್ತಾಳೆ ಎಂಬ ಉದ್ದೇಶ ದಿಂದ ಆಕೆಯ ಪತಿ ಲಕ್ಷ್ಮಣ್ ನನ್ನು ಸುಪಾರಿ ನೀಡಿ‌ ಕೊಲೆ‌ ಮಾಡಿಸಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮಣ್ ಕುಮಾರ್ ಕೊಲೆ ಮಾಡಿದ ನಂತರ ಸುಪಾರಿ ಪಡೆದ ಪ್ರಮುಖ ಆರೋಪಿ ದಿನೇಶ್ ಗೆ  15ಲಕ್ಷರೂ ಹಾಗೂ ಹೈದರಾಬಾದ್ ನಲ್ಲಿ ಒಂದು ಮನೆ ಕೊಡಿಸುವುದಾಗಿ ಸತ್ಯ ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಚಾಕು, 3 ಕಾರುಗಳು,  ಒಂದು ದ್ವಿ ಚಕ್ರ ವಾಹನ ಹಾಗೂ ಲ್ಯಾಪ್ ಟಾಪ್, ಮೊಬೈಲ್ ಫೋನ್ ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Comment