ಪ್ರಬುದ್ಧ ಯೋಜನೆಗೆ ಚಾಲನೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಡಿ. ೭- ವಿದೇಶ ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ “ಪ್ರಭುದ್ಧ” ಯೋಜನೆಯನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಇದೊಂದು ಉತ್ತಮ ಯೋಜನೆಯಾಗಿದೆ. ಯುವಕರೂ ಆದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅತ್ಯಂತ ಸೂಕ್ತವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಉದ್ದೇಶದ ಲಾಭವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ನಾನು ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದೇನೆ. ಸರ್ಕಾರದ ನೆರವಿನಿಂದ ಆಸ್ಟ್ರೇಲಿಯಾದಲ್ಲಿ ತಾವು ಡಾಕ್ಟರೆಟ್ ಪದವಿ ವ್ಯಾಸಂಗ ಮಾಡಿರುವುದಾಗಿ ತಿಳಿಸಿದ ಅವರು, ವಿದೇಶ ವ್ಯಾಸಂಗದ ಜತೆಗೆ ಮಾನಸ್ಥಿಕ ಸ್ಥೈರ್ಯವನ್ನು ರೂಢಿಸಿಕೊಂಡು ಅಪಾರ ಜ್ಞಾನಾರ್ಜನೆಯನ್ನು ಮಾಡಬೇಕು. ಸಮಾಜ ಸೇವೆಗೆ ಕಂಕಣಬದ್ಧರಾಗಿರಬೇಕು ಎಂದು ಅವರು ಹೇಳಿದರು.

ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೂ ಎಷ್ಟೋ ಮಂದಿಗೆ ಇಂಥ ಅವಕಾಶ ಸಿಕ್ಕಿರುವುದಿಲ್ಲ. ಆರ್ಥಿಕ ಮತ್ತು ಪರಿಸರದ ತೊಂದರೆಯಿಂದಾಗಿ ವಿದೇಶ ವ್ಯಾಸಂಗಕ್ಕೆ ಹೋಗುವ ಆಸಕ್ತಿ ಇದ್ದರೂ ಅವಕಾಶಗಳು ದೊರೆತಿರುವುದಿಲ್ಲ. ನಿಮಗೆ ದೊರೆತಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

2001 ರಲ್ಲಿ ಆರಂಭವಾದ ಈ ಯೋಜನೆಯಡಿಯಲ್ಲಿ ಇದುವರೆವಿಗೂ 282 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದೇಶ ವ್ಯಾಸಂಗ ಪಡೆದಿದ್ದಾರೆ. ಈ ಬಾರಿ ಈ ಸಂಖ್ಯೆಯನ್ನು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರು ಹೆಚ್ಚಳ ಮಾಡಿದ್ದಾರೆ. ಈ ಬಾರಿ ಪದವಿ ಶಿಕ್ಷಣಕ್ಕೂ ವಿದೇಶಕ್ಕೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಹೆಣ್ಣುಮಕ್ಕಳಿಗೆ ಶೇ. 33 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅಂಗವಿಕಲರಿಗೆ ಶೇ. 3 ರಷ್ಟು ಮೀಸಲಾತಿ ನೀಡಿರುವುದು ಇಡೀ ದೇಶದಲ್ಲೇ ಇದೇ ಮೊದಲ ಬಾರಿಯಾಗಿದೆ ಎಂದು ಪ್ರಶಂಸಿಸಿದರು.

ಬರೋಡ ಮಹಾರಾಜರು ಡಾ. ಅಂಬೇಡ್ಕರ್ ಅವರಿಗೆ ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿ ವೇತನ ನೀಡದೇ ಹೋಗಿದ್ದರೆ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಆಗುತ್ತಿರಲಿಲ್ಲ. ಅಂಥ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. ನೀವೂ ಕೂಡ ಅಂಥ ಪ್ರತಿಭೆಯನ್ನು ಮೆರೆದು ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

400 ವಿದ್ಯಾರ್ಥಿಗಳಿಗೆ ಅವಕಾಶ

ಇದಕ್ಕೂ ಮುನ್ನ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, 2001 ರಲ್ಲಿ ಆರಂಭವಾದ ಈ ಪ್ರಭುದ್ಧ ಯೋಜನೆಯಡಿಯಲ್ಲಿ ಇದುವರೆವಿಗೂ 282 ವಿದ್ಯಾರ್ಥಿಗಳು ವಿದೇಶ ವ್ಯಾಸಂಗಕ್ಕೆ ತೆರಳಿದ್ದು, ಈ ಬಾರಿ 400 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. 250 ಪದವಿ ಹಾಗೂ 150 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಿಕೊಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 120 ಕೋಟಿ ಮೀಸಲಿಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ವಿದೇಶಗಳಿಗೆ ತೆರಳಲು ತಗಲುವ ವಿಮಾನಯಾನದ ವೆಚ್ಚ, ವಾರ್ಷಿಕ ನಿರ್ವಹಣೆ ಮತ್ತಿತರ ಸೌಲಭ್ಯಗಳಿಗಾಗಿ ಹಣ ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.

Leave a Comment