ಪ್ರಧಾನಿ ರಾಜೀನಾಮೆಗೆ ರಾಹುಲ್ ಆಗ್ರಹ

ನವದೆಹಲಿ, ಅ. ೧೧- ರಫೇಲ್ ಒಪ್ಪಂದದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಭ್ರಷ್ಟ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭ್ರಷ್ಟಾಚಾರದ ಆರೋಪಕ್ಕೆ ಉತ್ತರ ನೀಡದೆ ಮೌನ ವಹಿಸಿರುವ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ,ಅನಿಲ್ ಅಂಬಾನಿ ಅವರ ಚೌಕಿದಾರರಾಗಿದ್ದಾರೆ. ಹೀಗಾಗಿ ಅವರ ಜೇಬಿಗೆ 30 ಸಾವಿರ ಕೋಟಿ ರೂ. ಹಾಕಿದ್ದಾರೆ. ಈ ಮೂಲಕ ನಷ್ಟದಲ್ಲಿರುವ ಅನಿಲ್ ಅಂಬಾನಿಗೆ ಉಡುಗೊರೆ ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಹತ್ತು ದಿನಗಳ ಮುಂಚೆ ಆರಂಭವಾಗಿದ್ದ ಅನಿಲ್ ಅಂಬಾನಿ ಅವರ ಕಂಪನಿಗೆ ರಫೇಲ್ ಯುದ್ಧ ವಿಮಾನಗಳ ಗುತ್ತಿಗೆ ನೀಡಲಾಗಿದೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಕೇಳಿಬಂದರೂ ಪ್ರಧಾನಿ ಉತ್ತರ ನೀಡದೆ ಮೌನವಹಿಸಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ದೇಶದ ಪ್ರಧಾನಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ರಫೇಲ್ ಒಪ್ಪಂದದ ಸಂಬಂಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ರಾನ್ಸ್‌ಗೆ ತೆರಳಿದ್ದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ಸತ್ಯ ನಿಧಾನವಾದರೂ ಒಂದಲ್ಲಾಒಂದು ದಿನ ಹೊರಬರಲಿದೆ. ಕಾಂಗ್ರೆಸ್ ಮಾಡಿದ ಆರೋಪಕ್ಕೆ ಪೂರಕ ಮಾಹಿತಿಗಳು ಲಭ್ಯವಾಗಿವೆ ಎಂದರು.
ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿದ್ದರೂ ಯಾವುದೇ ಸ್ಪಷ್ಟನೆ ನೀಡದೆ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ. ಈ ಮೌನವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ.
2014ರ ಲೋಕಸಭಾ ಚುನಾವಣೆ ವೇಳೆ ದೇಶದ ಜನರಿಗೆ ನರೇಂದ್ರ ಮೋದಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸುವ ಬಗ್ಗೆ ಪ್ರಧಾನಿಗಳು ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಭ್ರಷ್ಟಾಚಾರ ಬರೀ ರಕ್ಷಣಾ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ವಿವಿಧ ವಲಯಗಳಲ್ಲೂ ಇದು ವ್ಯಾಪಿಸಿದೆ. ಜನರನ್ನು ಭರವಸೆಗಳ ಮೂಲಕ ಮರುಳು ಮಾಡಲು ನಿರತರಾಗಿದ್ದಾರೆ ಎಂದು ದೂರಿದರು.

Leave a Comment