ಪ್ರಧಾನಿ ಮೋದಿ ಸುಳ್ಳರಲ್ಲಿ ಅತಿ ಸುಳ್ಳ

ರಾಯಚೂರು.ಜ.12- ವಿದೇಶದಲ್ಲಿರುವ ಕಪ್ಪು ಹಣ ಸ್ವದೇಶಕ್ಕೆ ತರುವ ಭರವಸೆ ಮೇರೆಗೆ ಅಧಿಕಾರ ಗದ್ದುಗೇರಿರುವ ಪ್ರಧಾನಿ ನರೇಂದ್ರಮೋದಿ ರವರು ಜನತೆಯನ್ನು ಯಾಮಾರಿಸುವ ಸುಳ್ಳರಲ್ಲಿ ಅತಿ ಸುಳ್ಳರಾಗಿದ್ದಾರೆಂದು ಪ್ರಧಾನಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್. ಪಾಟೀಲ್ ಹರಿದಾಯ್ದರು.
ದೇವದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಿಸ್ ದೇಶದಲ್ಲಿರುವ ಭಾರತೀಯರ ಕಪ್ಪು ಹಣ ಸ್ವದೇಶಕ್ಕೆ ತರುವ ಸುಳ್ಳು ಭರವಸೆ ಮೇರೆಗೆ ದೇಶದ ಜನತೆಯನ್ನು ಯಾಮಾರಿಸಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷ ಗತಿಸಿದರೂ ಪ್ರಸ್ತುತವರೆಗೂ ಜನಧನ್ ಖಾತೆ ಹೊಂದಿರುವ ಜನತೆಯ ಬ್ಯಾಂಕ್ ಖಾತೆಗೆ ನಯಾಪೈಸೆ ಜಮಾವಣೆ ಮಾಡದೇ, ಅತ್ತ ಕಪ್ಪು ಹಣ ಭಾರತಕ್ಕೆ ಮರಳಿಸುವ ಚಕಾರವೆತ್ತದೇ ಬಂಡವಾಳ ಶಾಹಿಪರ ವಕಾಲತ್ತು ಮುಂದುವರೆದಿದೆ.
ಜನಧನ್ ಖಾತೆ ಹೊಂದಿರುವ ಪ್ರತಿಯೊಬ್ಬ ಭಾರತೀಯರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಜಮಾವಣೆ ಮಾಡುವ ಪ್ರಧಾನಿ ರವರ ಭರವಸೆ ಶುದ್ಧ ಸುಳ್ಳಾಗಿದೆ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ಸಮಾಜವನ್ನು ಹೊಡೆಯುವ ಹುನ್ನಾರ ಮುಂದುವರೆಸಿರುವ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ದಿನಮಾನದಲ್ಲಿ ಪ್ರಜೆಗಳೇ ತಕ್ಕಪಾಠ ಕಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಜನತೆಗೆ ನೀಡಿರುವ 165 ಭರವಸೆ ಪೈಕಿ 150ಕ್ಕೂ ಮೇಲ್ಪಟ್ಟು ಭರವಸೆ ರಾಜ್ಯ ಸರ್ಕಾರ ಈಗಾಗಲೇ ಈಡೇರಿಸಿದ್ದು, ಮುಂಬರುವ ದಿನಗಳಲ್ಲಿ ಬಾಕಿ ಜನಪರ ಭರವಸೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನಿಸಲಾಗುವುದು. ಜಾತ್ಯಾತೀತ ಮನೋಭಾವವೇ ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದ್ದರೇ, ಜನತೆಯನ್ನು ಮರಳು ಮಾಡುವುದೇ ಬಿಜೆಪಿ ಜಾಯಮಾನವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಪುನಃ ಬೆಂಬಲಿಸಲಿದ್ದಾರೆಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ, ಕೇಂದ್ರ ಮಾಚಿ ಸಚಿವ ಕೆ.ಹೆಚ್. ಮುನಿಯಪ್ಪ, ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಆರ್‌ಡಿಸಿಸಿ ಮಾಜಿ ಅಧ್ಯಕ್ಷ ಎ.ರಾಜಶೇಖರ ನಾಯಕ, ಮುಖಂಡರಾದ ಪಾರಸಮಲ್ ಸುಖಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment