ಪ್ರಧಾನಿ ಮೋದಿ ನೆರೆ ಪರಿಸ್ಥಿತಿ ವೀಕ್ಷಣೆಗೆ ಬಾರದಿರಲು ತೇಜಸ್ವಿ ಸೂರ್ಯ ಕಾರಣ:

ವಿಜಯಪುರ,ಸೆ. 23:ನೆರೆ ಪರಿಹಾರಕ್ಕೆ ಕೇಂದ್ರ ಸರಕಾರದ ಅನುದಾನ ಬೇಕಿಲ್ಲ’ ಎಂದ ಸಂಸದ ತೇಜಸ್ವಿ ಸೂರ್ಯ ಕೂಡಲೇ ಕ್ಷಮೆ ಕೋರದಿದ್ದರೆ ಸಂತ್ರಸ್ತರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ತೇಜಸ್ವಿ ತಕ್ಷಣವೇ ನೆರೆ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಜನತೆ ನೆರೆ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಕನ್ನಡಿಗರಿಗೆ ಮಾಡಿದ ಅಗೌರವ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯದ ಬಗ್ಗೆ ಈ ಸಂಸದ ತೇಜಸ್ವಿ ಸೂರ್ಯಗೆ ಎಷ್ಟು ಕಾಳಜಿ ಇದೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. ಬೆಳಗಾವಿಯಲ್ಲೇ ಕೂತು ಇಂತಹ ಹೇಳಿಕೆ ನೀಡುತ್ತಾರೆ, ಇನ್ನು ಹೊಸದಿಲ್ಲಿಯಲ್ಲಿ ಹೇಗೆ ಹೇಳಿಕೆ ನೀಡಬಹುದು. ಇವರು ಪ್ರಧಾನಿ ಎದುರು ಏನು ಹೇಳಿರಬೇಕೆಂದು ಸಂಶಯ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ನೆರೆ ಪರಿಸ್ಥಿತಿ ವೀಕ್ಷಣೆಗೆ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡದೆ ಇರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಕಾರಣ ಎಂದು ವಾಗ್ದಾಳಿ ನಡೆಸಿದ ಪಾಟೀಲ್, ತೇಜಸ್ವಿ ಸೂರ್ಯ, ಮೋದಿಯವರನ್ನು ದಾರಿ ತಪ್ಪಿಸಿರುವ ಸಾಧ್ಯತೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನರ್ಹ ಶಾಸಕರ ಮುಂದಿನ ನಡೆಯ ಬಗ್ಗೆ ಗೊತ್ತಾಗುತ್ತಿಲ್ಲ. ಅನರ್ಹ ಶಾಸಕರು ಪಕ್ಷ ದ್ರೋಹ ಮಾಡಿದ್ದು, ಸಂವಿಧಾನ ಬಾಹಿರ ಕೆಲಸ ಮಾಡಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶ ಎತ್ತಿಹಿಡಿಯುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸುವ ಭರವಸೆ ಇದೆ ಎಂದು ತಿಳಿಸಿದರು.

Leave a Comment